ಹಾಲಿವುಡ್ ರೇಂಜ್‌ನಲ್ಲಿ 'ಟಾಕ್ಸಿಕ್' ಚಿತ್ರ; ಸ್ಟಂಟ್ವಿಸ್ ತಂತ್ರಜ್ಞಾನ ಬಳಕೆಗೆ ಮುಂದು; ಕರೀನಾ ಕಪೂರ್ ಎಂಟ್ರಿ ಫಿಕ್ಸ್?

ಕೆಜಿಎಫ್ ನಂತರ ಯಶ್ ಅವರ ಮುಂದಿನ ಸಿನಿಮಾವನ್ನು ಟಾಕ್ಸಿಕ್ ಎಂದು ಘೋಷಿಸಲಾಗಿದ್ದು, ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವು ಸ್ಟಂಟ್ವಿಸ್ (Stuntvis) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಬಳಸಲಾಗುತ್ತಿದೆ. 
ಕರೀನಾ ಕಪೂರ್ ಖಾನ್ - ಟಾಕ್ಸಿಕ್
ಕರೀನಾ ಕಪೂರ್ ಖಾನ್ - ಟಾಕ್ಸಿಕ್
Updated on

ಕೆಜಿಎಫ್ ನಂತರ ಯಶ್ ಅವರ ಮುಂದಿನ ಸಿನಿಮಾವನ್ನು ಟಾಕ್ಸಿಕ್ ಎಂದು ಘೋಷಿಸಲಾಗಿದ್ದು, ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಟಾಕ್ಸಿಕ್- ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ ಚಿತ್ರಕ್ಕೆ ಹೆಸರಿಡಲಾಗಿದ್ದು, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಲಿದ್ದಾರೆ. ಟೈಟಲ್ ಟೀಸರ್‌ಗೆ ವ್ಯಕ್ತವಾಗಿರುವ ಅಗಾಧ ಪ್ರತಿಕ್ರಿಯೆಗಾಗಿ ನಟ ಯಶ್ ಕೃತಜ್ಞತೆ ಸಲ್ಲಿಸಿದ್ದಾರೆ. ಇಂದು ನಟ ಯಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಜನವರಿ 8 ರಂದು ತಾವು ನಗರದಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರವು ಸದ್ಯ ಪ್ರೀ ಪ್ರೊಡಕ್ಷನ್ಸ್ ಹಂತದಲ್ಲಿದ್ದು, ಚಿತ್ರವನ್ನು ಅದ್ಧೂರಿಯಾಗಿ ಚಿತ್ರಿಸಲು ಚಿತ್ರತಂಡ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ವೈವಿಧ್ಯಮಯ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿದೆ. ಟಾಕ್ಸಿಕ್‌ ಸಿನಿಮಾವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಚಿತ್ರವು ಸ್ಟಂಟ್ವಿಸ್ (Stuntvis) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಬಳಸಲಾಗುತ್ತಿದೆ. ಸ್ಟಂಟ್ವಿಸ್ ಒಂದು ವರ್ಚುವಲ್ ನಿರ್ಮಾಣವಾಗಿದ್ದು, ಸ್ಟೋರಿಬೋರ್ಡಿಂಗ್, ಕಂಪ್ಯೂಟರ್-ರಚಿತ ಚಿತ್ರಣ (CGI) ಮತ್ತು ದೃಶ್ಯ ಸಾಧನಗಳನ್ನು ಒಳಗೊಂಡಿರುತ್ತದೆ. ಚಿತ್ರೀಕರಣಕ್ಕೂ ಮುನ್ನ ಸಂಕೀರ್ಣವಾದ ಆ್ಯಕ್ಷನ್ ದೃಶ್ಯಗಳು ಅಥವಾ ಸ್ಟಂಟ್ಸ್‌ಗಳನ್ನು ಮ್ಯಾಪಿಂಗ್ ಮಾಡುವುದು, ಸುರಕ್ಷತೆ, ನೃತ್ಯ ಸಂಯೋಜನೆ ಮತ್ತು ಆನ್-ಸೆಟ್ ಎಕ್ಸಿಕ್ಯೂಶನ್‌ಗೂ ಮುನ್ನ ಚಿತ್ರಕ್ಕೆ ಉತ್ತಮ ಎಫೆಕ್ಟ್‌ ಅನ್ನು ನೀಡುತ್ತದೆ.

ಟಾಕ್ಸಿಕ್‌ನ ಅಧಿಕೃತ ಚಿತ್ರೀಕರಣ ಇನ್ನೂ ಪ್ರಾರಂಭವಾಗದಿದ್ದರೂ, ಯಶ್ ಈಗಾಗಲೇ ಈ ಯೋಜನೆಗೆ ಅಗತ್ಯ ಅಡಿಪಾಯ ಹಾಕುವಲ್ಲಿ ನಿರತರಾಗಿದ್ದಾರೆ. ಚಿತ್ರ ನಿರ್ಮಾಣ ಪ್ರಕ್ರಿಯೆಯ ಪ್ರಮುಖ ಅಂಶಗಳನ್ನು ಹೆಚ್ಚಿಸಲು ಚಿತ್ರತಂಡವು ಈಗಾಗಲೇ ಅಣಕು ಶೂಟ್‌ಗಳು ಮತ್ತು ರಿಹರ್ಸಲ್‌ಗಳನ್ನು ನಡೆಸಿದೆ ಎಂದು ಮೂಲಗಳು ಸೂಚಿಸಿವೆ. ಸಾಂಪ್ರದಾಯಿಕ ಮಾನದಂಡಗಳನ್ನು ಮೀರಿ ಪರಿಪೂರ್ಣತೆಯ ಮಟ್ಟಕ್ಕಾಗಿ ಗಮನಹರಿಸಿದೆ. 

ಟಾಕ್ಸಿಕ್‌ ಸಿನಿಮಾದೊಂದಿಗೆ ನಟ ಯಶ್ ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆಶಯವನ್ನು ಹೊಂದಿದ್ದಾರೆ. ಚಿತ್ರಕ್ಕೆ ಜೆರೆಮಿ ಸ್ಟಾಕ್ ಸಂಗೀತ ಸಂಯೋಜಿಸಲಿದ್ದು, ರಾಜೀವ್ ರವಿ ಅವರ ಛಾಯಾಗ್ರಹಣವಿದೆ. ಚಿತ್ರದ ಇನ್ನುಳಿದ ತಾಂತ್ರಿಕ ಸಿಬ್ಬಂದಿಯನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

ಟಾಕ್ಸಿಕ್‌ಗೆ ಕರೀನಾ ಕಪೂರ್ ಎಂಟ್ರಿ ಫಿಕ್ಸ್?

ಯಶ್ ಅಭಿನಯದ ಟಾಕ್ಸಿಕ್ ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ನಟಿಸಲಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ. ಟೀಸರ್‌ನಲ್ಲಿ ಪ್ಲೇ ಆಗುತ್ತಿರುವ ಹಾಡನ್ನು ಶ್ರುತಿ ಅವರೇ ಹಾಡಿರುವುದು ಇದಕ್ಕೆಲ್ಲ ಮೂಲ ಕಾರಣ ಎನ್ನಲಾಗುತ್ತಿದೆ. ಇದೀಗ ಹೊಸ ವಿಚಾರವೆಂದರೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಈ ಚಿತ್ರದ ಭಾಗವಾಗಿರಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರಕ್ಕಾಗಿ ಆರಂಭಿಕ ಆಯ್ಕೆಗಳಲ್ಲಿ ಕರೀನಾ ಇದ್ದಾರೆ ಎಂದು ಮೂಲಗಳು ಸೂಚಿಸಿವೆ. 

ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಕರೀನಾ ಅವರ ಹೇಳಿಕೆಯು, ಕೆಜಿಎಫ್ ಸ್ಟಾರ್ ಯಶ್ ಅವರೊಂದಿಗೆ ಕೆಲಸ ಮಾಡುವ ಸುಳಿವು ನೀಡಿದ್ದು, ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿತು. ಪಾತ್ರವರ್ಗ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲವಾದರೂ, ಎಲ್ಲವೂ ಅಂದುಕೊಂಡಂತೆ ನಡೆದರೆ, ಟಾಕ್ಸಿಕ್ ಮೂಲಕ ಕರೀನಾ ಕಪೂರ್ ಖಾನ್ ದಕ್ಷಿಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com