
ತರುಣ್ ಕಿಶೋರ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ಕಾಟೇರ ಮೂರನೇ ವಾರವು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಕರ್ನಾಟಕದಲ್ಲಿ ವಿವಿಧ ಭಾಷೆಗಳು ಸೇರಿದಂತೆ ಇತರ ಸಿನಿಮಾಗಳು ಬಿಡುಗಡೆಯಾಗಿದ್ದರೂ, ಕಾಟೇರ ಸುಮಾರು 416 ಚಿತ್ರಮಂದಿರಗಳಲ್ಲಿ ಮತ್ತು 72 ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಆಗಿರುವುದರಿಂದ ಚಿತ್ರಮಂದಿರಗಳು ಹೌಸ್‌ಫುಲ್ ಆಗುವ ನಿರೀಕ್ಷೆಯಿದೆ.
ಚಿತ್ರತಂಡದ ಪ್ರಕಾರ, ಚಿತ್ರವು ವಿದೇಶದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಯುಎಸ್ಎ, ಜರ್ಮನಿ, ಯುಕೆ, ಕೆನಡಾ ಮತ್ತು ಐರ್ಲೆಂಡ್ ಮುಂತಾದ ವಿವಿಧ ದೇಶಗಳಲ್ಲಿ ಬಿಡುಗಡೆಯಾಗಿದೆ.
ಕಾಟೇರ ಚಿತ್ರದ ನಿರ್ಮಾಣ ಸಂಸ್ಥೆಯಾದ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಚಿತ್ರವನ್ನು ಇತರ ಭಾಷೆಗಳಲ್ಲಿಯೂ ಡಬ್ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಸದ್ಯ ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, 'ನಾವು ಫೆಬ್ರುವರಿಯಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತೇವೆ' ಎಂದು ಉಲ್ಲೇಖಿಸಿದ್ದಾರೆ.
ಕಲೆಕ್ಷನ್ ವಿವರಗಳ ಬಗ್ಗೆ ನಿರ್ಮಾಪಕರು ಯಾವುದೇ ವಿವರ ಬಿಚ್ಚಿಡದಿದ್ದರೂ, ಕಾಟೇರ ಬಾಕ್ಸ್ ಆಫೀಸ್ ಕಲೆಕ್ಷನ್ 150 ಕೋಟಿ ರೂ. ದಾಟಿದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟ ಮುಂದುವರಿಸಿದೆ.
'ಚಿತ್ರವು ಉತ್ತಮ ಕಲೆಕ್ಷನ್ ಮಾಡುತ್ತಿದೆ ಮತ್ತು ಜನರು ಸಕಾರಾತ್ಮಕ ಮಾತುಗಳನ್ನಾಡುತ್ತಿದ್ದಾರೆ. ಕಮರ್ಷಿಯಲ್ ಅಂಶಗಳಿರುವ ಕಂಟೆಂಟ್ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಕಾಟೇರ ಸದ್ಯ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದ್ದು, ಜನರು ತಮ್ಮ ಕುಟುಂಬಗಳ ಸಮೇತ ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ವಿದೇಶದಲ್ಲಿರುವ ಜನರು ತಮ್ಮ ಮೆಚ್ಚುಗೆ ಸೂಚಿಸಲು ನನಗೆ ಕರೆ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸಂಭ್ರಮಾಚರಣೆ ನಡೆಯುತ್ತಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಅವರು.
ಕಾಟೇರ ಚಿತ್ರಕಥೆಯನ್ನು ತರುಣ್ ಕಿಶೋರ್ ಸುಧೀರ್ ಮತ್ತು ಜಡೇಶ್ ಕೆ ಹಂಪಿ ಬರೆದಿದ್ದಾರೆ. ಸಂಭಾಷಣೆಯನ್ನು ಮಾಸ್ತಿ ಬರೆದಿದ್ದಾರೆ. ಚಿತ್ರದಲ್ಲಿ ಶ್ರುತಿ, ವಿನೋದ್ ಆಳ್ವ, ಕುಮಾರ್ ಗೋವಿಂದ್, ಜಗಪತಿ ಬಾಬು, ರೋಹಿತ್ ಪಿವಿ, ಮತ್ತು ಬಿರಾದಾರ್ ಸೇರಿದಂತೆ ನಾಯಕಿಯಾಗಿ ಆರಾಧನಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಮತ್ತು ಛಾಯಾಗ್ರಹಣವಿದೆ.
Advertisement