
ಇತ್ತೀಚಿನ ದಿನಗಳಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು, ವಿಭಿನ್ನ ರೀತಿಯ ಸಿನಿಮಾಗಳನ್ನ ಆಯ್ಕೆ ಮಾಡಿಕೊಳ್ಳುವುದರಲ್ಲಿ ಮುಂದಿದ್ದಾರೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ಅವರು ಹಾರಾರ್ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.
ಹಾರಾರ್ ಸಿನಿಮಾ ಮೂಲಕವೇ ಪ್ರಖ್ಯಾತಿ ಗಳಿಸಿರೋ ನಿರ್ದೇಶಕ ಲೋಹಿತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಪ್ರಜ್ವಲ್ ಹುಟ್ಟುಹಬ್ಬದ ವಿಶೇಷವಾಗಿ (ಜು.4) ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಪೋಸ್ಟರ್ನಲ್ಲಿ ಪ್ರಜ್ವಲ್ ಅವರ ಕಣ್ಣು ಗಮನ ಸೆಳೆದಿದೆ.
ಪ್ರಜ್ವಲ್ ಅವರು ಕುರುಡನ ರೀತಿ ಕಾಣಿಸಿಕೊಂಡಿದ್ದಾರೆ. ಹಿಂಭಾಗದಲ್ಲಿ ರೋಮನ್ ಅಂಕೆಯಲ್ಲಿ ಬರೆದ ಗಡಿಯಾರ ಇದೆ. ಗಡಿಯಾರದ ಗಾಜುಗಳು ಪುಡಿಪುಡಿ ಆಗಿವೆ. ಸಿನಿಮಾದ ಹೆಸರಿಗೆ ತಕ್ಕಂತೆಯೇ ಪೋಸ್ಟರ್ ಮೂಡಿ ಬಂದಿದೆ. ಈ ಪೋಸ್ಟರ್ನಲ್ಲಿ ಪ್ರಜ್ವಲ್ ಅವರು ರಾಕ್ಷಸನ ರೀತಿಯೇ ಕಾಣಿಸಿಕೊಂಡಿದ್ದಾರೆ.
ದೀಪು ಬಿ ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ‘ರಾಕ್ಷಸ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದು, ಜೇಬಿನ್ ಪಿ ಜೋಕಬ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸುಮಾರು 55 ದಿನಗಳ ಕಾಲ ‘ರಾಕ್ಷಸ’ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು, ಸಂಪೂರ್ಣ ಸಿನಿಮಾ ಚಿತ್ರೀಕರಣ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ನಡೆದಿದೆ.
ಪ್ರಜ್ವಲ್ ಜೊತೆ ಅರುಣ್ ರಾಥೋಡ್, ಶ್ರೀಧರ್,ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ.
Advertisement