
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ‘ಬಾ ಬಾ ಬ್ಲಾಕ್ ಶೀಪ್’ ಎನ್ನುತ್ತಾ ಖಡಕ್ ಧ್ವನಿಯಲ್ಲಿ ಟೀಸರ್ ಅನ್ನು ಅಭಿಮಾನಿಗಳ ಮುಂದೆ ಪ್ರಸ್ತುತ ಪಡಿಸಿದ್ದಾರೆ ಕಿಚ್ಚ ಸುದೀಪ್. ಟೀಸರ್ ನಲ್ಲಿ ಸುದೀಪ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಟೀಸರ್‌ನಲ್ಲಿ ಬಹಳ ಗುಟ್ಟನ್ನೇನು ಬಿಟ್ಟುಕೊಟ್ಟಿಲ್ಲ ನಿರ್ದೇಶಕರು. ಜನಪ್ರಿಯ ‘ಬಾ ಬಾ ಬ್ಲಾಕ್ ಶೀಪ್’ ಇಂಗ್ಲೀಷ್ ಪದ್ಯದ ಸಾಹಿತ್ಯವನ್ನು ಬದಲು ಮಾಡಿ ಟೀಸರ್‌ನಲ್ಲಿ ಬಳಸಿಕೊಂಡಿದ್ದು, ಅದರ ಮೂಲಕವೇ ಕೆಲವು ಸುಳಿವುಗಳನ್ನಷ್ಟೆ ನೀಡಲಾಗಿದೆ. “ಬಾ ಬಾ ಬ್ಲ್ಯಾಕ್ ಶೀಪ್, ಹ್ಯಾವ್ ಯೂ ಎನಿ ಕ್ಲೂ? ಎಂದು ನಟ ಟೀಸರ್‌ನಲ್ಲಿ ಹೇಳುತ್ತಾರೆ.
ತೆಲುಗಿನ ನಟ ಸುನಿಲ್ ಅನ್ನು ವಿಲನ್ ಆಗಿ ತೋರಿಸಲಾಗಿದೆ. ಅವರ ದೃಶ್ಯ ಟೀಸರ್‌ನಲ್ಲಿ ಕಾಣಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ಸುದೀಪ್ ಹಿನ್ನೆಲೆಯಲ್ಲಿ ಹೇಳುವ ಪದ್ಯದ ‘ಸ್ಕ್ರೌಂಡ್ರಲ್’ ಸಾಲನ್ನು ಜೋಡಿಸಲಾಗಿದೆ. ಟೀಸರ್‌ನಲ್ಲಿ ವರಲಕ್ಷ್ಮಿ ಶರತ್ಕುಮಾರ್ ಪಾತ್ರವನ್ನೂ ತುಸು ಹೈಲೆಟ್ ಮಾಡಲಾಗಿದ್ದು, ವರಲಕ್ಷ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ.
ಪ್ಯಾನ್-ಇಂಡಿಯಾ ಚಲನಚಿತ್ರವೆಂದು ಬಿಂಬಿಸಲಾದ ಮ್ಯಾಕ್ಸ್, ಅದರ ಪ್ರಾರಂಭದಿಂದಲೂ ಅಪಾರ ಉತ್ಸಾಹವನ್ನು ಉಂಟುಮಾಡಿದೆ. ಕಿಚ್ಚ ಸುದೀಪ್ ಅವರ 2022 ರ ಚಲನಚಿತ್ರ ವಿಕ್ರಾಂತ್ ರೋಣದ ನಂತರ ಮತ್ತೊಂದು ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆಗಸ್ಟ್ 15 ರಂದು ಚಿತ್ರವು ವಿಶ್ವಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಆದರೆ ನಿರ್ದೇಶಕರು ಇನ್ನೂ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಲ್ಲ.
‘ಮ್ಯಾಕ್ಸ್’ ಸುದೀಪ್ ನಟನೆಯ 46ನೇ ಸಿನಿಮಾವಾಗಿದ್ದು, 2023ರಲ್ಲಿ ಸಿನಿಮಾ ಸೆಟ್ಟೇರಿತ್ತು. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ. ಸುದೀಪ್ ಜೊತೆಗೆ ‘ಪುಷ್ಪ’ ಖ್ಯಾತಿಯ ಸುನೀಲ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮುಂತಾದವರ ಪಾತ್ರದ ತುಣುಕುಗಳನ್ನು ಟೀಸರ್ ಹೊಂದಿದೆ. ಮ್ಯಾಕ್ಸ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
Advertisement