
ವಿಶಾಖಪಟ್ಟಣಂ: ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ''ರೆಡ್ ಹ್ಯಾಂಡ್'' ಆಗಿ ಹಿಡಿದ ''Miss Vizag'' ನಕ್ಷತ್ರ, ಕ್ಯಾಮೆರಾ ಮುಂದೆಯೇ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಹೌದು.. ಮಾಜಿ ಸುಂದರಿ ಮಿಸ್ ವೈಜಾಗ್ ನಕ್ಷತ್ರ ತನ್ನ ಪತಿಯು ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಹಿಂದೆಯೇ ಮಿಸ್ ವೈಜಾಗ್ ನಕ್ಷತ್ರ ಮತ್ತು ಆಕೆಯ ಪತಿ ತ್ರಿಪುರಾಣ ವೆಂಕಟ ಸಾಯಿ ತೇಜಾ ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ಕುರಿತು ವ್ಯಾಪಕ ಸುದ್ದಿ ಹರಿದಾಡಿದ್ದವು. ಅವರ ಆಪ್ತ ವಲಯದಲ್ಲಿ ಈ ಬಿರುಕಿಗೆ ಪತಿ ಸಾಯಿ ತೇಜಾ ಅವರ ವಿವಾಹೇತರ ಸಂಬಂಧವೇ ಕಾರಣ ಎಂದು ಹೇಳಲಾಗಿತ್ತು. ಅಲ್ಲದೆ 2021ರಲ್ಲೇ ಈ ಜೋಡಿ ಕೋರ್ಟ್ ನಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತದೆ. ಇದರ ನಡುವೆಯೇ ಇದೀಗ ಅವರ ಪತ್ನಿಯೇ ಪತಿ ಸಾಯಿ ತೇಜಾರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದಿದ್ದಾರೆ.
ಮೇ 31 ರಂದು ವಿಶಾಖಪಟ್ಟದಲ್ಲಿರುವ ಕಚೇರಿಯಲ್ಲಿ ತೇಜಾ ಬೇರೊಬ್ಬ ಮಹಿಳೆಯ ಜೊತೆಗೆ ಇರುವುದನ್ನು ತಿಳಿಯುತ್ತಿದ್ದಂತೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿ ನಕ್ಷತ್ರರವರು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ನಕ್ಷತ್ರ ವ್ಯಕ್ತಿಯೊಬ್ಬನಿಗೆ ಕಚೇರಿಯ ಬಾಗಿಲು ತೆರೆಯಲು ಹೇಳುತ್ತಿದ್ದಾರೆ.
ಕೊನೆಗೆ ತಾನೇ ಬಾಗಿಲನ್ನು ತಳ್ಳಿ ಒಳಗೆ ಹೋದ ನಕ್ಷತ್ರ ಪತಿಯ ಜೊತೆಗೆ ಇದ್ದ ಮಹಿಳೆಯ ಮೇಲೆ ಸಿಕ್ಕಸಿಕ್ಕ ವಸ್ತುಗಳನ್ನು ಬಿಸಾಡಿದ್ದಾರೆ. ಪತಿಯು ಜೋರಾಗಿ ಮಾತನಾಡಲು ಶುರು ಮಾಡುತ್ತಿದ್ದಂತೆ ಪತಿಗೆ ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಲ್ಲದೇ, ತೇಜಾ ವಿಚ್ಛೇದನ ನೀಡದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಮಾಜಿ ಮಿಸ್ ವೈಜಾಗ್ ಆರೋಪಿಸಿದ್ದಾರೆ.
ಆರೋಪ ನಿರಾಕರಿಸಿದ ಪತಿ ತೇಜಾ
ಇನ್ನು ಪತ್ನಿ ನಕ್ಷತ್ರ ಮಾಡಿರುವ ಎಲ್ಲ ಆರೋಪಗಳನ್ನು ಪತಿ ಸಾಯಿತೇಜಾ ನಿರಾಕರಿಸಿದ್ದು, “ನನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಮತ್ತು ಅವು ನ್ಯಾಯಾಲಯದಲ್ಲಿ ಬಾಕಿ ಇವೆ.” ತನ್ನ ಕೋಣೆಯಲ್ಲಿದ್ದ ಮಹಿಳೆಯು ತನ್ನ ಚಲನಚಿತ್ರಕ್ಕಾಗಿ ಆಡಿಷನ್‌ಗೆ ಬಂದಿದ್ದರು ಎಂದು ಸಮರ್ಥನೆ ನೀಡಿದ್ದಾರೆ.
Advertisement