
ನಾಗ ಅಶ್ವಿನ್ ನಿರ್ದೇಶನದ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರವು ಜೂನ್ 27 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಕರ್ನಾಟಕದ ವಿತರಣಾ ಹಕ್ಕುಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಪಡೆದುಕೊಂಡಿದೆ. ಬಿ & ಬಿ: ಬುಜ್ಜಿ ಮತ್ತು ಭೈರವ ಎಂಬ ಎರಡು ಭಾಗಗಳ ಹದಿನೈದು ನಿಮಿಷಗಳ ಅನಿಮೇಟೆಡ್ ಸರಣಿಯನ್ನು ಬಿಡುಗಡೆ ಮಾಡುವ (ಅಮೆಜಾನ್ ಪ್ರೈಮ್ ವಿಡಿಯೋ) ವೇಳೆ ಪ್ರೊಡಕ್ಷನ್ ಹೌಸ್ ಪರವಾಗಿ ಸುಪ್ರಿತ್ ಈ ಸುದ್ದಿಯನ್ನು ದೃಢಪಡಿಸಿದರು.
ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿರುವ ಕಲ್ಕಿ 2898 AD ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು, ಬುಜ್ಜಿಯಾಗಿ (ವಿಶೇಷ ಕಾರು) ಕಾಣಿಸಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಹೈ-ಬಜೆಟ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಸಂತೋಷ್ ನಾರಾಯಣನ್, ಸಂಕಲನಕಾರರಾಗಿ ಕೋಟಗಿರಿ ವೆಂಕಟೇಶ್ವರ ರಾವ್ ಮತ್ತು ಛಾಯಾಗ್ರಾಹಕರಾಗಿ ಜೊರ್ಡ್ಜೆ ಸ್ಟೋಜಿಲ್ಜ್ಕೋವಿಕ್ ಇದ್ದಾರೆ. 2020ರಲ್ಲಿ 'Project K' ಎಂದು ಹೆಸರಿಟ್ಟು ಸೆಟ್ಟೇರಿದ ಈ ಬಹುಭಾಷಾ ಸಿನಿಮಾವನ್ನು ವೈಜಯಂತಿ ಮೂವೀಸ್‌ನ ಸಂಸ್ಥಾಪಕ ಅಶ್ವಿನಿ ದತ್ ನಿರ್ಮಿಸಿದ್ದಾರೆ.
Advertisement