
ಡಾಲಿ ಧನಂಜಯ್ ನಟನೆಯ ಕೋಟಿ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಮೊದಲ ಹಾಡು 'ಮಾತು ಸೋತು' ಅನ್ನು ಬಿಡುಗಡೆ ಮಾಡಿದೆ. ನಾಯಕಿ ಮೋಕ್ಷಾ ಕುಶಾಲ್ ಅವರನ್ನೂ ಒಳಗೊಂಡಿರುವ ಈ ಹಾಡು ಇದೀಗ ಸರಿಗಮ ಕನ್ನಡದ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.
ಕೋಟಿ ಸಿನಿಮಾದ ಸಂಗೀತ ಸಂಯೋಜಕರಾದ ವಾಸುಕಿ ವೈಭವ್ ಅವರು ಗೀತರಚನೆಕಾರ ಯೋಗರಾಜ್ ಭಟ್ ಮತ್ತು ಗಾಯಕ ಅರ್ಮಾನ್ ಮಲಿಕ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. 'ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಉತ್ತಮ ಅನುಭವವಾಗಿದೆ ಮತ್ತು ಅರ್ಮಾನ್ ಜೊತೆಗೂಡಿ ಕೆಲಸ ಮಾಡಿರುವುದು ಸಂಪೂರ್ಣ ಸಂತೋಷವಾಗಿದೆ. ಈ ಹಾಡು ಕೇಳುಗರೊಂದಿಗೆ ಆಳವಾಗಿ ಕನೆಕ್ಟ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ವಾಸುಕಿ ಹಂಚಿಕೊಳ್ಳುತ್ತಾರೆ.
ವಾಸುಕಿ ವೈಭವ್ ಅವರ ಸಂಗೀತ, ಯೋಗರಾಜ್ ಭಟ್ ಅವರ ಹೃದಯಸ್ಪರ್ಶಿ ಸಾಹಿತ್ಯ ಮತ್ತು ಅರ್ಮಾನ್ ಮಲಿಕ್ ಅವರ ಭಾವಪೂರ್ಣ ಗಾಯನದ ಶಕ್ತಿಯುತ ಸಂಯೋಜನೆಯು ಕನ್ನಡ ಪ್ರೇಕ್ಷಕರಿಗೆ ಆಳವಾಗಿ ಅನುರಣಿಸುತ್ತದೆ ಎಂದು ಕೋಟಿ ನಿರ್ದೇಶಕ ಪರಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಟಿ ಚಿತ್ರದಲ್ಲಿ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ ಮತ್ತು ಸರ್ದಾರ್ ಸತ್ಯದಂತಹ ಅನುಭವಿಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು ಐದು ಹಾಡುಗಳಿರುವ ಈ ಚಿತ್ರಕ್ಕೆ ನೋಬಿನ್ ಪಾಲ್ ಅವರ ಹಿನ್ನೆಲೆ ಸಂಗೀತ, ಅರುಣ್ ಬ್ರಹ್ಮ ಅವರ ಛಾಯಾಗ್ರಹಣ ಮತ್ತು ಪ್ರತೀಕ್ ಶೆಟ್ಟಿ ಅವರ ಸಂಕಲನವಿದೆ. ಜಿಯೋ ಸ್ಟುಡಿಯೋಸ್ ನಿರ್ಮಿಸಿರುವ ಕೋಟಿ ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.
Advertisement