
ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದಲ್ಲಿ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿದ್ದು, ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಟೈಮ್ ಬರುತ್ತೆ’ ಎಂಬ ಮೊದಲ ಹಾಡನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಹಿಟ್ ಆಗಿದೆ. ಇದೀಗ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆಯು ಪಡೆದುಕೊಂಡಿದ್ದು, ಹೊಸಬರ ಚಿತ್ರಕ್ಕೆ 1 ಕೋಟಿ ರೂ.ಗೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಜಸ್ಸಿ ಗಿಫ್ಟ್ ಮತ್ತು ಚಂದನ್ ಶೆಟ್ಟಿ ಸೇರಿದಂತೆ ಹಲವಾರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
'ಈ ರೋಮಾಂಚನಕಾರಿ ಬೆಳವಣಿಗೆಯು ಚಿತ್ರದ ಸಂಗೀತದ ಶ್ರೇಷ್ಠತೆಯ ಬಗ್ಗೆ ಉದ್ಯಮದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಪ್ರಬಲವಾದ ಪಾತ್ರವರ್ಗ ಮತ್ತು ನಾನು ನಿರ್ದೇಶನದ ಹೊಣೆ ಹೊತ್ತಿರುವುದರಿಂದ, ಗೌರಿ ಮೂಲಕ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲು ನಾವು ಸಾಕಷ್ಟು ಕೆಲಸ ಮಾಡುತ್ತಿದ್ದೇವೆ' ಎಂದು ನಿರ್ದೇಶಕ ಇಂದ್ರಜಿತ್ ಹೇಳುತ್ತಾರೆ.
ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ಸಾನ್ಯಾ ಅಯ್ಯರ್ ಅವರು ನಾಯಕಿಯಾಗಿ ಗೌರಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೆ, ಮಿಸ್ ಟೀನ್ ಯೂನಿವರ್ಸ್ ಆದ ಸ್ವೀಝಲ್ ಮತ್ತು ಚಂದು ಗೌಡ ನಟಿಸಿದ್ದಾರೆ. ಚಿತ್ರಕ್ಕೆ ಎಜೆ ಶೆಟ್ಟಿ ಅವರ ಛಾಯಾಗ್ರಹಣ ಮತ್ತು ಡಿಫರೆಂಟ್ ಡ್ಯಾನಿ ಪೈಟಿಂಗ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
Advertisement