
ಹಿರಿಯ ಚಲನಚಿತ್ರ ನಿರ್ದೇಶಕ ಕಾಶಿನಾಥ್ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಎಸ್ ಭಗತ್ ರಾಜ್ ಅವರು ದಿ ಸೂಟ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಮೇ 17 ರಂದು ಚಿತ್ರವು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರವು ವೈವಿಧ್ಯಮಯ ಕಥಾಹಂದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಸುಜಯ್ ಆರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟನ ಪ್ರಕಾರ, ಈ ಚಿತ್ರವು ವಿಶೇಷವಾಗಿ ತಮ್ಮ ಪಾತ್ರವು ತಮ್ಮ ಸಿನಿಮಾ ವೃತ್ತಿಜೀವನದಲ್ಲಿಯೇ ಮಹತ್ವದ್ದಾಗಿದೆ. ರಾಮನಾಥ್ ರುಗ್ವೇದಿಯವರ ಅಧಿಕಾರ ಚಿತ್ರದ ಮೂಲಕ ನಾನು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದೆ. ಆ ಚಿತ್ರದಲ್ಲಿನ ಅಭಿನಯವು ನಿರ್ದೇಶಕ ಭಗತ್ ರಾಜ್ ಅವರ ಕಣ್ಣಿಗೆ ಬಿದ್ದಿತು. ಇದು ದಿ ಸೂಟ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನನ್ನನ್ನು ಸೇರಿಸಿಕೊಳ್ಳಲು ಕಾರಣವಾಯಿತು' ಎಂದು ಸುಜಯ್ ಹೇಳುತ್ತಾರೆ. ಸುಜಯ್ ಪಾತ್ರದ ಬಗ್ಗೆ ವಿವರಗಳು ಲಭ್ಯವಿಲ್ಲದಿದ್ದರೂ, ತಾವು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದರು.
ಭವಿಷ್ಯದಲ್ಲಿ ಇನ್ನಷ್ಟು ಸವಾಲಿನ ಪಾತ್ರಗಳನ್ನು ನಿಭಾಯಿಸುವ ಉತ್ಸುಕತೆಯನ್ನು ವ್ಯಕ್ತಪಡಿಸುವ ಸುಜಯ್ ಆರ್ಯ, ನನ್ನ ಕಂಫರ್ಟ್ ಝೋನ್‌ನಿಂದ ಹೊರಬಂದು ವೈವಿಧ್ಯಮಯ ಪಾತ್ರಗಳನ್ನು ಅನ್ವೇಷಿಸಲು ನಾನು ಮುಕ್ತನಾಗಿದ್ದೇನೆ ಎಂದು ಹೇಳಿದರು.
ಭಗತ್ ರಾಜ್ ನಿರ್ದೇಶನದ ಮತ್ತು ಬಿ ರಾಮಸ್ವಾಮಿ ಮತ್ತು ಮಾಲತಿ ಗೌಡ ನಿರ್ಮಾಣದ ದಿ ಸೂಟ್ ಚಿತ್ರದಲ್ಲಿ ಆರು ಹಾಡುಗಳಿದ್ದು, ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ್ ಅವರ ಛಾಯಾಗ್ರಹಣವಿದೆ. ಚಿತ್ರದ ತಾರಾಗಣದಲ್ಲಿ ಕಮಲ್, ಮಂಜುನಾಥ್ ಪಾಟೀಲ್, ದೀಪ್ತಿ ಕಾಪ್ಸೆ, ಕುಸುಮಾ ರಾಮಯ್ಯ, ವಿ ನಾಗೇಂದ್ರ ಪ್ರಸಾದ್, ಗಡ್ಡ ವಿಜಯ್ ಮತ್ತು ಉಮೇಶ್ ಬಣಕಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Advertisement