ದುಬೈ ಮೂಲದ ಕರಾವಳಿ ಭಾಗದ ಕನ್ನಡಿಗ ಶಿಥಿಲ್ ಜಿ ಪೂಜಾರಿ ಅವರು ಗುರುದತ್ತ ಗಾಣಿಗ ಅವರ ನಿರ್ದೇಶನದ ಕರಾವಳಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಮಂಗಳೂರಿನವರಾದ ಇವರು ಮಿಸ್ಟರ್ ದುಬೈ 2019, ಬೆಸ್ಟ್ ಪೀಪಲ್ಸ್ ಚಾಯ್ಸ್ ದುಬೈ ಮತ್ತು ಬೆಸ್ಟ್ ಫಿಸಿಕ್ ದುಬೈ ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಈ ಆಕ್ಷನ್-ಪ್ಯಾಕ್ಡ್ ಡ್ರಾಮಾದಲ್ಲಿ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.
ಚಿತ್ರದಲ್ಲಿನ ಪಾತ್ರಕ್ಕಾಗಿ ಹೊಸ ಮುಖವನ್ನು ಹುಡುಕುತ್ತಿದ್ದ ಗುರುದತ್ತ ಗಾಣಿಗ ಅವರು ದುಬೈನಲ್ಲಿ ಆಡಿಷನ್ ಮೂಲಕ ಶಿಥಿಲ್ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ವಾಲಿ ಎಂಬ ಪಾತ್ರದಲ್ಲಿ ಶಿಥಿಲ್ ನಟಿಸಲಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಕರಾವಳಿ ಚಿತ್ರವು ಪ್ರಜ್ವಲ್ ದೇವರಾಜ್ ಅವರ 40ನೇ ಚಿತ್ರವಾಗಿದ್ದು, ಸಂಪದಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ಕಥೆ ಬರೆದಿದ್ದಾರೆ. ನಿರ್ದೇಶನದ ಹೊರತಾಗಿ, ಗುರುದತ್ತ ಗಾಣಿಗ ಅವರು ವಿಕೆ ಫಿಲ್ಮ್ಸ್ ಜೊತೆಗೆ ಈ ಯೋಜನೆಯನ್ನು ಸಹ ನಿರ್ಮಾಣ ಮಾಡಲಿದ್ದಾರೆ. ಗ್ರಾಮೀಣ ಹಿನ್ನೆಲೆಯ ಈ ಚಿತ್ರವು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಕಥೆಯನ್ನು ಹೊಂದಿದೆ.
ಇನ್ನುಳಿದಂತೆ ಮಿತ್ರ, ಶ್ರೀಧರ್ ಮತ್ತು ನಿರಂಜನ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ನೀಡಲಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡಿದ್ದಾರೆ.
Advertisement