ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ರಮೇಶ್ ಇಂದಿರಾ ಅವರು ಇದೀಗ ಪ್ರಜ್ವಲ್ ದೇವರಾಜ್ ಅಭಿನಯದ ಗುರುದತ್ತ ಗಾಣಿಗ ನಿರ್ದೇಶನದ ಕರಾವಳಿ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ರಮೇಶ್ ಇಂದಿರಾ ಅವರು ವಿಲನ್ ಪಾತ್ರದಲ್ಲಿ ನಟಿಸಿದ್ದು, ದೀಪಾವಳಿ ಹಬ್ಬದಂದು ಚಿತ್ರ ತಂಡ ಸಿನಿಮಾದ ಪೋಸ್ಟರ್ ನ್ನು ಬಿಡುಗಡೆ ಮಾಡಿದೆ.
ಪೋಸ್ಟರ್ ನಲ್ಲಿ ರಮೇಶ್ ಇಂದಿರಾ ಅವರು, ಉದ್ದನೆಯ ಹಳೆ ಮರ್ಸಿಡೀಸ್ ಬೆಂಜ್ ಕಾರಿನ ಮೇಲೆ ಪಂಚೆ ತೊಟ್ಟು ಬರಿಮೈಯಲ್ಲಿ, ಹೆಗಲಿಗೆ ಟವೆಲ್ ಒಂದನ್ನು ಹಾಕಿಕೊಂಡು ಕೂತು, ಕೈಯಲ್ಲಿ ಉದ್ದನೆಯ ಸಿಂಗಲ್ ಶಾಟ್ ಬಂದೂಕು ಹಿಡಿದಿರುವ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್‌ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ.
‘ಕರಾವಳಿ’ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ನಟಿ ಸಂಪದಾ (ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.
Advertisement