ಕವಲುದಾರಿ ನಟ ರಿಷಿ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ರುದ್ರ ಗರುಡ ಪುರಾಣ ಚಿತ್ರ ಡಿ.27ಕ್ಕೆ ಬಿಡುಗಡೆಯಾಗಲಿದೆ.
ಚಿತ್ರದ "ಕಣ್ಣ ಮುಂದೆ ಬಂದು" ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ನಟ ರಿಷಿ, ಯಶಸ್ವಿ ಚಿತ್ರವನ್ನು ನಿರ್ಮಿಸುವಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರ ಪ್ರಮುಖ ಪಾತ್ರಗಳ ಬಗ್ಗೆ ಹೇಳಿದರು.
ಇದೇ ವೇಳೆ ಚಿತ್ರಕಥೆ ಬರೆದ ನಂದೀಶ್ ಅವರನ್ನು ಶ್ಲಾಘಿಸಿದರು. ಸ್ಕ್ರಿಪ್ಟ್-ಟು-ಸ್ಕ್ರೀನ್ ಅನುವಾದವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ನಿರ್ಮಾಪಕ ಲೋಹಿತ್ ಅವರಿಗೆ ಧನ್ಯವಾದ ಹೇಳಿದರು.
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ನನ್ನದು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಬಹಳ ಸಖತ್ತಾಗಿದೆ. ಕಥೆಯ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇಂದು ಬಿಡುಗಡೆ ಆಗಿರುವ "ಕಣ್ಣ ಮುಂದೆ ಬಂದು" ಹಾಡು ಎಲ್ಲರ ಹೃದಯಕ್ಕೆ ಹತ್ತಿರವಾಗಲಿದೆ. ಚಿತ್ರ ಕೂಡ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದಲ್ಲಿ ರಿಷಿ ಜೊತೆಗೆ ಅಶ್ವಿನಿ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಾಮ್ ಪವನ್, ನಂದ, ವಂಶಿ ಸೇರಿದಂತೆ ಕೆಲವರು ಅಭಿನಯಿಸಿದ್ದಾರೆ.
ಹೆಸರಾಂತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಬಳಿ ಕಾರ್ಯ ನಿರ್ವಹಿಸಿರುವ ಕೆ.ಪಿ (ಕೃಷ್ಣಪ್ರಸಾದ್) ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈಗ ಬಿಡುಗಡೆಯಾಗಿರುವ ಹಾಡು ಹಾಗೂ ಹಾಡಿದವರ ಬಗ್ಗೆ ಕೆ.ಪಿ ಇದೇ ವೇಳೆ ಮಾಹಿತಿ ನೀಡಿದರು.
ಈ ಚಿತ್ರಕ್ಕೆ ಸಂದೀಪ್ ಕುಮಾರ್ ಅವರ ಛಾಯಾಗ್ರಹಣವಿದ್ದು, ಅಶ್ವಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಲೋಹಿತ್ ಚಿತ್ರ ನಿರ್ಮಿಸಿದ್ದಾರೆ, ಇನ್ನು ಚಿತ್ರದ ತಾರಾಗಣದಲ್ಲಿ ವಿನೋದ್ ಆಳ್ವ, ಗಿರಿ, ಕೆಎಸ್ ಶ್ರೀಧರ್, ಮತ್ತು ಜಗಪ್ಪ ಮತ್ತು ಪ್ರಸನ್ನ ಮುಂತಾದ ಹಾಸ್ಯ ನಟರು ಇದ್ದಾರೆ.
Advertisement