ಚರಣ್ ನಿರ್ದೇಶನದ, ಕಿರಣ್ ರಾಜ್ -ಕಾಜಲ್ ಕುಂದರ್ ಜೋಡಿಯಾಗಿ ನಟಿಸಿರುವ 'ಮೇಘ' ಚಿತ್ರ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.
‘ಮೇಘ’ ಸಿನಿಮಾದಲ್ಲಿ ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವೆ ಇರುವ ಸಣ್ಣ ವ್ಯತ್ಯಾಸವನ್ನು ತಿಳಿಸುವ ಕಥೆ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
‘ಕೃಷಿ ಪ್ರೊಡಕ್ಷನ್ಸ್’ ಸಂಸ್ಥಾಪಕರಾದ ಯತೀಶ್ ಹೆಚ್.ಆರ್, ಯತೀಶ್ ಆರ್.ಜಿ ಹಾಗೂ ರಮೇಶ್ ಎಚ್.ಎನ್ ಅವರ ಸಹಕಾರದೊಂದಿಗೆ ಪ್ರತಿ ವರ್ಷ ತಲಾ ಒಂದು ಉತ್ತಮವಾದ ಸಿನಿಮಾವನ್ನು ನಿರ್ಮಾಣ ಮಾಡಲು ಸಂಕಲ್ಪ ಹೊಂದಿದ್ದಾರೆ. ‘ಕೃಷಿ ಪ್ರೊಡಕ್ಷನ್ಸ್’ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ‘ಮೇಘ’ ಮೂಡಿಬಂದಿದೆ.
ಕಿರಣ್ ರಾಜ್ ಮತ್ತು ಕಾಜಲ್ ಕುಂದರ್ ಜೊತೆ ರಾಜೇಶ್ ನಟರಂಗ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀರೋ ತಂದೆಯ ಪಾತ್ರವನ್ನು ಅವರಿಗೆ ನೀಡಲಾಗಿದೆ.
ಸಿನಿಮಾದಲ್ಲಿ ಶೋಭರಾಜ್, ಸುಂದರ್ ವೀಣಾ, ಸಂಗೀತಾ, ಹನುಮಂತೇಗೌಡ, ಗಿರೀಶ್ ಶಿವಣ್ಣ, ತರಂಗ ವಿಶ್ವ ಮುಂತಾದ ಕಲಾವಿದರು ನಟಿಸಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಜೋಯಲ್ ಸಕ್ಕರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ.
ಬಿಡುಗಡೆಗೆ ಸಜ್ಜಾಗುತ್ತಿರುವ 'ಮೇಘ' ಚಿತ್ರ ತಂಡಕ್ಕೆ, ಚಂದ್ರಶೇಖರ್ ರವರು ಸ್ಥಾಪಿಸಿದ 35 ವರ್ಷಗಳ ಅನುಭವ ಮತ್ತು 250 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದ ಪರಂಪರೆ ಹೊಂದಿರುವ ರವಿ ಫಿಲಂಸ್ ರವರು ಕೈ ಜೋಡಿಸಿದ್ದಾರೆ.
Advertisement