ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯರಾಗಿರುವ ಅಫ್ಜಲ್ ಅವರು “ಹೊಸತರ” ಎಂಬ ಚಿತ್ರದ ಮೂಲಕ ನಿರ್ದೇಶನಕನಾಗಿ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿದ್ದು, ಈ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿರುವ ಸಂದರ್ಭದಲ್ಲೇ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ರೆಡ್ & ವೈಟ್‌ನ ಸೆವೆನ್ ರಾಜ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ “ನೆನಪುಗಳ ಮಾತು ಮಧುರ” ಎಂಬ ಶೀರ್ಷಿಕೆ ನೀಡಲಾಗಿದೆ.
ನಿರ್ಮಾಪಕ ಸೆವೆನ್ ರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಚಿತ್ರದ ಶೀರ್ಷಿಕೆಯನ್ನು ಅನಾವಾರಣಗೊಳಿಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ.
ಚಿತ್ರದ ಚಿತ್ರೀಕರಣ ಬೆಂಗಳೂರು, ಆನೇಕಲ್, ಕೆಂಗೇರಿ ಸುತ್ತಾಮುತ್ತಾ ನಡೆದಿದ್ದು, ಚಿತ್ರದಲ್ಲಿ ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ.
ವಿಭಿನ್ನ ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ, ಹಾರರ್ ಹಾಗೂ ಹಾಸ್ಯ ಇದ್ದು, ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳೂ ಇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಅಫ್ಜಲ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ಸ್ವಾಮಿ ಮೈಸೂರು ಅವರ ಛಾಯಾಗ್ರಹಣ, ರಾಜು ಎಮ್ಮಿಗನೂರು ಅವರ ಸಂಗೀತ, ಕಾರ್ತಿಕ್ ಈಶ್ವರಾಚಾರಿ ಅವರ ಸಂಕಲನ ಮತ್ತು ಎಂಎಸ್ ತ್ಯಾಗರಾಜ್ ಅವರ ಹಿನ್ನೆಲೆ ಸಂಗೀತವಿದೆ.
ಚಿತ್ರದಲ್ಲಿ ಅಫ್ಜಲ್ ಅವರು, ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ನಿರ್ಮಾಪಕ ಸೆವೆನ್‌ರಾಜ್ ಜೊತೆಗೆ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಷಕ ಪಾತ್ರದಲ್ಲಿ ವಸಿಷ್ಟ ಬಂಟನೂರ್, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾಧ್ಯ, ಗುಬ್ಬಚ್ಚಿ, ಅರವಿಂದ್, ನಾಗೇಂದ್ರ ಅರಸ್ ಮತ್ತು ಇತರರು ಇದ್ದಾರೆ.
Advertisement