
ಒಂಬತ್ತು ವರ್ಷಗಳ ವಿರಾಮದ ನಂತರ ಯುಐ ಸಿನಿಮಾ ಮೂಲಕ ಉಪೇಂದ್ರ ನಿರ್ದೇಶನಕ್ಕೆ ಮರಳಿದ್ದಾರೆ. ಹೀಗಾಗಿ ಉಪೇಂದ್ರ ಅಭಿಮಾನಿಗಳು ಯುಐ ಸಿನಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟಿಕೊಂಡಿದ್ದಾರೆ.
ಬಹುನಿರೀಕ್ಷಿತ ‘ಯುಐ’ ಸಿನಿಮಾ ಇದೇ ವರ್ಷದ ಅಂತ್ಯಕ್ಕೆ ಅಂದರೆ ಡಿಸೆಂಬರ್ 20ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಇದರ ವಿಎಫ್‌ಎಕ್ಸ್, ಪೋಸ್ಟ್ ಪ್ರೊಡಕ್ಷನ್, ಸಂಗೀತದ ಕೆಲಸಗಳೆಲ್ಲ ಪೂರ್ಣಗೊಂಡಿದ್ದು, ಕೊನೆಯ ಹಂತದ ಕೆಲವು ಕೆಲಸಗಳು ನಡೆಯುತ್ತಿವೆ. ಈ ಹಿಂದೆ ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆ ಕಾಣಲಿದೆ ಎನ್ನಲಾಗಿತ್ತು. ಈಗ ಇದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.
ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಉಪ್ಪಿ ಅಭಿಮಾನಿಗಳು ಯುಐ ಸಿನಿಮಾ ರಿಲೀಸ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಅವರ ವಿಭಿನ್ನ ಕಥೆ ಹೇಳುವ ಶೈಲಿಗಾಗಿ ಭಾರೀ ನಿರೀಕ್ಷೆ ಮೂಡಿದೆ. ಕ್ರಿಸ್‌ಮಸ್ ರಜಾದಿನ ಇರುವ ಕಾರಣ ಪ್ರೇಕ್ಷಕರ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಮಂದಿರಕ್ಕೆ ಬರುತ್ತಾರೆ ಎಂಬ ಕಾರಣದಿಂದ ನಿರ್ದೇಶಕರು ಡಿಸೆಂಬರ್ 20 ಅನ್ನು ಆಯ್ಕೆ ಮಾಡಿದಂತಿದೆ. ಅದೇ ದಿನ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ತೆಲುಗು ಚಿತ್ರ ಗೇಮ್ ಚೇಂಜರ್ ಸಿನಿಮಾವನ್ನು ಸಂಕ್ರಾಂತಿಗೆ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ, ಡಿಸೆಂಬರ್ 20ರಂದು ಯು ಐ ಮಾತ್ರ ರಿಲೀಸ್ ಆಗುತ್ತಿದೆ.
ಉಪೇಂದ್ರ ನಿರ್ದೇಶನ ಮಾತ್ರವಲ್ಲದೆ UI ನಲ್ಲಿ ನಟಿಸಿದ್ದಾರೆ, ಲಹರಿ ಫಿಲಂಸ್‌ನ ಜಿ ಮನೋಹರ್ ನಾಯ್ಡು ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆಪಿ ಶ್ರೀಕಾಂತ್ ಸಿನಿಮಾ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ರವಿಶಂಕರ್ ಮತ್ತು ಸಾಧು ಕೋಕಿಲಾ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮದೊಂದಿಗಿನ ತಮ್ಮ ಇತ್ತೀಚಿನ ಸಂವಾದದಲ್ಲಿ ಮಾತನಾಡಿದ ಉಪೇಂದ್ರ, ಜನರು ಯಾವಾಗಲೂ ನಾನು ಅವರ ತಲೆಗೆ ಹುಳ ಬಿಡುತ್ತೇನೆ ಎಂದು ಹೇಳುತ್ತಾರೆ. ಆದರೆ UI ನಲ್ಲಿ, ನಾನು ಜನರ ತಲೆಯಿಂದ ಆಲೋಚನೆಗಳನ್ನು ತೆಗೆದು ಹಾಕುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement