
ಸ್ಯಾಂಡಲ್ ವುಡ್ ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಅವರ ಹೊಸ ಚಿತ್ರ ಸೆಟ್ಟೇರಿದ್ದು, ಚಿತ್ರಕ್ಕೆ ರಾಶಿ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಆದಿತ್ಯ ಅವರಿಗೆ ಕಿರುತೆರೆ ನಟಿ ಸಮೀಕ್ಷಾ ಜೋಡಿಯಾಗಿದ್ದಾರೆ.
ಆದಿತ್ಯ ಶಶಿಕುಮಾರ್ ಅವರ ಹುಟ್ಟುಹಬ್ಬದ ದಿನವೇ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ನಾಯಕನಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ.
ಚಿತ್ರದ ಕುರಿತು ಮಾತನಾಡಿರುವ ಆದಿತ್ಯ ಶಶಿಕುಮಾರ್ ಅವರು, ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ, ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದರು.
ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸಬೇಕೆಂದರು. ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನನ್ನು ಮಾಡುತ್ತಿದ್ದೇನೆ. “ಟ್ರಿಗರ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ. ಇತ್ತೀಚಿಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಈ ಪ್ರೇಮ ಕಥಾನಕಕ್ಕೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ವಿಜಯ್ ಪಾಳೇಗಾರ್ ಮಾಹಿತಿ ನೀಡಿದರು.
Advertisement