ಸ್ಯಾಂಡಲ್‌ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿರುವ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈ ನಡುವಲ್ಲೇ ತಮ್ಮ ಸಿನಿ ಭವಿಷ್ಯದ ಬಗ್ಗೆ ನಟಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಭೈರಾದೇವಿ ಚಿತ್ರದ ಪ್ರಮೋಷನ್ ವೇಳೆಯೇ ನಟಿ ರಾಧಿಕಾ ಅವರು, ಭೈರಾದೇವಿ ಯಶಸ್ಸು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಭೈರಾದೇವಿಯನ್ನು ಪ್ರೇಕ್ಷಕರು ಪ್ರೀತಿಸಿದರೆ, ನಾನು ನನ್ನ ಚಲನಚಿತ್ರ ಪ್ರಯಾಣವನ್ನು ಮುಂದುವರಿಸುತ್ತೇನೆ. ಇಲ್ಲದಿದ್ದರೆ ಇದೇ ನನ್ನ ಕೊನೆಯ ಚಿತ್ರವಾಗಲಿದೆ ಎಂದಿದ್ದಾರೆ.
ದಸರಾ ಹಬ್ಬದ ವೇಳೆ ಅಕ್ಟೋಬರ್ 3 ರಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಅತೀಂದ್ರಿಯ ಶಕ್ತಿ, ದೇವರು-ದುಷ್ಟ ಶಕ್ತಿ ನಡುವಿನ ಯುದ್ಧದ ಕತೆಯನ್ನು ಸಿನಿಮಾ ಒಳಗೊಂಡಿದೆ. ರಾಧಿಕಾ ಅವರು ಕಾಳಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವು ಧೈರ್ಯ ಮತ್ತು ಪ್ರೀತಿಯ ಸಂದೇಶವನ್ನು ನೀಡುತ್ತದೆ.
ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಪಾತ್ರ ಪ್ರಮುಖವಾಗಿದ್ದು, ರಮೇಶ್ ಅವರ ಪಾತ್ರ ಅದ್ಭುತವಾಗಿದ್ದು, ರಮೇಶ್ ಅವರು ಒಪ್ಪಿಕೊಂಡ ನಂತರವೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಇನ್ನು ಕಾಳಿ ವೇಷದ ಬಗ್ಗೆ ಮಾತನಾಡುವುದಾಗರೆ ನಾನು ಕಾಳಿ ವೇಷ ಧರಿಸಿದಾಗ ನನ್ನಲ್ಲಿ ಕೆಲವು ಬದಲಾವಣೆ ಆಗುತ್ತಿತ್ತು. ಮೊದಲ ದಿನ ನಾನು ಕಾಳಿ ವೇಷ ಧರಿಸಿದಾಗ ತಲೆ ಎತ್ತಲು ನನಗೆ ಕಷ್ಟವಾಗುತ್ತಿತ್ತು. ಈ ಘಟನೆ ನಂತರ ನಮ್ಮ ಕೋರಿಯೋಗ್ರಫರ್ ಹಾಗೂ ಡೈರೆಕ್ಟರ್ ನನ್ನನ್ನು ದೇವಸ್ಥಾನವೊಂದಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆಸಿದರು. ಆನಂತರವೇ ನನಗೆ ಈ ಪಾತ್ರದಲ್ಲಿ ನಟಿಸುವುದು ಸುಲಭವಾಯಿತು ಎಂದು ತಿಳಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಭೈರಾದೇವಿ ಆಗಿದ್ದು, ಇದೇ ಅಕ್ಟೋಬರ್ 3ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಹಾಡೂ ರಿಲೀಸ್ ಆಗಿ ಸದ್ದು ಮಾಡುತ್ತಿದ್ದು, ಚಿತ್ರಕ್ಕೆ ಶ್ರೀಜೈ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಚಿತ್ರಕ್ಕೆ ಜೆ.ಎಸ್.ವಾಲಿ ಛಾಯಾಗ್ರಾಹಕರಾಗಿದ್ದು, ರವಿವರ್ಮಾ ಸಾಹಸ ಸಂಯೋಜನೆ, ಮೋಹನ್ ಬಿ ಕೆರೆ ಆರ್ಟ್ ವರ್ಕ್, ಕೆ.ಕೆ.ಸೆಂಥಿಲ್ ಪ್ರಕಾಶ್ ಸಂಗೀತ ನೀಡಿದ್ದಾರೆ.
Advertisement