
ಗುರುತೇಜ್ ಶೆಟ್ಟಿ ನಿರ್ದೇಶನದ, “ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ನಾಯಕನಾಗಿರುವ ಸಿನಿಮಾ “ರಾನಿ’ ಸಿನಿಮಾ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ 2ನೇ ವಾರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
ಚಿತ್ರದ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆಗೆ ನಟಿ ರಾಧ್ಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ನಲ್ಲಿದೆ. ಹೀಗಾಗಿ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಭಯವಿತ್ತು. ಆದರೆ, ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುತ್ತಿರುವ ಪ್ರತಿಕ್ರಿಯೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಚಿತ್ರರಂಗದಲ್ಲಿ ಇತರೆ ರಾಜ್ಯಗಳ ಕಲಾವಿದರಿದೆ ಆದ್ಯತೆ ನೀಡುತ್ತಿರುವ ಕುರಿತು ನಟಿ ಬೇಸರ ಹೊರಹಾಕಿದ್ದಾರೆ.
ನನ್ನ ಪರಿಶ್ರಮವನ್ನು ಚಿತ್ರರಂಗ ಗುರ್ತಿಸಿರುವುದಕ್ಕೆ ಸಂತಸವಿದೆ. ಆದರೆ, ಕನ್ನಡ ನಟ-ನಟಿಯರಿಗೆ ಬೆಂಬಲ ನೀಡಬೇಕೆಂಬುದು ಕೇವಲ ಧ್ವನಿಯಾಗಿಯೇ ಉಳಿದಿದೆ. ಸಾಕಷ್ಟು ಪ್ರತಿಭೆಗಳ ಹೊರತಾಗಿಯು ನಿರ್ಮಾಪಕರು ಇತರೆ ರಾಜ್ಯಗಳ ನಟ-ನಟಿಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ವೇದಿಕೆಗಳಲ್ಲಿಯೂ ಕಳವಳ ವ್ಯಕ್ತಪಡಿಲಿದ್ದೇನೆ. ಇದರ ಹಿಂದಿರುವ ವಾಸ್ತವತೆ ನನಗೆ ತಿಳಿದಿಲ್ಲ ಆದರೆ, ಬದಲಾವಣೆಯನ್ನು ಬಯಸುತ್ತಿದ್ದೇನೆಂದು ತಿಳಿಸಿದ್ದಾರೆ.
ಬಳಿಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯವರನ್ನು ನಟಿ ಶ್ಲಾಘಿಸಿದ್ದಾರೆ.
ನನಗೆ ತಮಿಳು ಹಾಗೂ ತೆಲುಗು ಚಿತ್ರಗಳಿಗೆ ಸಾಕಷ್ಟು ಆಫರ್ ಗಳು ಬರುತ್ತಿವೆ. ಆದರೆ, ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಇಲ್ಲಿನ ಉತ್ತಮ ಸಿನಿಮಾಗಳಿಗಾಗಿ ಹುಡುಕುತ್ತಿದ್ದೇನೆ. ಹೊಸ ಸಿನಿಮಾ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ನಾನು ಸಿದ್ಧ. ಆದರೆ, ಸಾಕಷ್ಟು ಮಂದಿ ಆರಂಭದಲ್ಲಿ ಉತ್ತಮ ಬಲದೊಂದಿಗೆ ಬಂದರೂ ನಂತರ ಸೂಕ್ತ ಬೆಂಬಲ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಇದರಿಂದ ಹಣ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತದೆ. ಇದೀಗ ನಾನು ನನ್ನ ವೃತ್ತಿಜೀವನದ ಬೆಳವಣಿಗೆಯ ಮೇಲೆ ಗಮನಹರಿಸುತ್ತಿದ್ದೇನೆ. ಹಣ ಸಂಪಾದಿಸುವ ಬದಲಿಗೆ ಸಮಯವಾದರೂ ಉತ್ತಮ ಸಿನಿಮಾಗಳ ಆಯ್ಕೆ ಮಾಡಲು ಬಯಸಿದ್ದೇನೆ. ಆತುರಪಡದೆ, ನನ್ನದೇ ಹೆಜ್ಜೆ ಮೂಲಕ ಉದಾಹರಣೆಯೊಂದಿಗೆ ಮುನ್ನಡೆಯುತ್ತೇನೆಂದು ರಾಧ್ಯಾ ತಿಳಿಸಿದ್ದಾರೆ.
Advertisement