
‘ದಿಯಾ’ ಚಿತ್ರದ ನಂತರ ದೀಕ್ಷಿತ್ ಶೆಟ್ಟಿ ಬೇರೆ ಭಾಷೆಗಳತ್ತ ಪ್ರಯಾಣ ಬೆಳೆಸಿರುವುದು ಗೊತ್ತೇ ಇದೆ. ಈಗಾಗಲೇ ಕೆಲವು ತೆಲುಗು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು ಇದೇ ಮೊದಲ ಬಾರಿಗೆ ವೆಬ್ ಸರಣಿಯಲ್ಲೂ ಅಭಿನಯಿಸಿದ್ದು, ಈ ವೆಬ್ ಸರಣಿಯು ಇತ್ತೀಚೆಗೆ ಬಿಡುಗಡೆಯಾಗಿದೆ.
‘ಟಚ್ ಮಿ ನಾಟ್’ ವೆಬ್ ಸೀರಿಸ್ ನಲ್ಲಿ ದೀಕ್ಷಿತ್ ಶೆಟ್ಟಿಯವರು ನಟಿಸಿದ್ದು, ಈ ವೆಬ್ ಸೀರಿಸ್ ಇದೀಗ ಜಿಯೋ ಹಾಟ್‍ಸ್ಟಾರ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ತೆಲುಗು ವೆಬ್ ಸರಣಿಯಾಗಿದ್ದು, ಬೇರೆ ಭಾಷೆಗಳಲ್ಲೂ ಲಭ್ಯವಿದೆ.
ಇದೊಂದು ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಾಗಿದ್ದು, ರಿಷಿ ಎಂಬ ಅಲೌಕಿಕ ಸಾಮರ್ಥ್ಯ ಹೊಂದಿರುವ ಯುವಕನ ಸುತ್ತ ಸುತ್ತತ್ತದೆ. ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವ ತಂಡದ ಭಾಗವಾಗಿರುವ ಆತ, ತನಗೆ ಅರಿವಿಲ್ಲದಂತೆಯೇ ನಿಗೂಢ ಕೊಲೆಗಾರನ ಗುರಿಯಾಗುತ್ತಾನೆ. ಅದರಿಂದ ಆತ ಹೇಗೆ ಹೊರಬರುತ್ತಾನೆ ಎನ್ನುವುದು ಈ ವೆಬ್ ಸರಣಿಯ ಕಥೆಯಾಗಿದೆ.
2020ರಲ್ಲಿ ಬಿಡಗಡೆಯಾದ ‘ದಿಯಾ’ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ ದೀಕ್ಷಿತ್ ಶೆಟ್ಟಿ, ಮರುವರ್ಷವೇ ತೆಲುಗಿನಲ್ಲಿ ‘ಮುಗ್ಗುರು ಮೊನಗಾಳ್ಳು’ ಮತ್ತು ‘ದಿ ರೋಸ್ ವಿಲ್ಲಾ’ ಚಿತ್ರಗಳಲ್ಲಿ ನಟಿಸಿದರು. ನಾನಿ ಅಭಿನಯದ ‘ದಸರಾ’ ಅವರಿಗೆ ಹೆಸರು ತಂದುಕೊಟ್ಟಿತು.
ಈ ಮಧ್ಯೆ, ಕಳೆದ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ‘ಬ್ಲಿಂಕ್’ ಚಿತ್ರವು ಯಶಸ್ವಿಯಾಯಿತು. ಕನ್ನಡದಲ್ಲಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’, ‘ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು’, ಶ್ರೀನಿಧಿ ಬೆಂಗಳೂರು ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಿರುವ ದೀಕ್ಷಿತ್, ತೆಲುಗಿನಲ್ಲಿ ‘ದಿ ಗರ್ಲ್‍ಫ್ರೆಂಡ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೂ ನಟಿಸುತ್ತಿದ್ದಾರೆ. ಜೊತೆಗೆ ತಮಿಳು ಹಾಗೂ ಮಲಯಾಳಂ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದು, ಆ ಚಿತ್ರಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಈ ಮಧ್ಯೆ, ‘ಟಚ್ ಮಿ ನಾಟ್’ ವೆಬ್ ಸರಣಿ ಬಿಡುಗಡೆಯಾಗಿದೆ.
Advertisement