
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಜನಪ್ರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಜಾಂಡೀಸ್ ನಿಂದ ಬಳಲುತ್ತಿದ್ದ ಸಂತೋಷ್ ಬಾಲರಾಜ್ ಅವರು, ಕೋಮಾ ಸ್ಥಿತಿಗೆ ಜಾರಿದ್ದರು ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
34 ವರ್ಷ ನಟ ಸಂತೋಷ್ ಬಾಲರಾಜ್ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರ ತಂದೆ ಆನೇಕಲ್ ಬಾಲರಾಜ್ 'ಕರಿಯ' ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಒಂದಿಷ್ಟು ಸಿನಿಮಾಗಳನ್ನು ನಿರ್ಮಿಸಿದ ಬಳಿಕ ಆನೇಕಲ್ ಬಾಲರಾಜ್ ತಮ್ಮ ಮಗ ಸಂತೋಷ್ ಬಾಲರಾಜ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಸಂತೋಷ್ ಬಾಲರಾಜ್ ಕನ್ನಡದಲ್ಲಿ 'ಕೆಂಪ', 'ಗಣಪ', 'ಬರ್ಕ್ಲಿ', 'ಕರಿಯ 2' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಗಣಪ' ಹಾಗೂ 'ಕರಿಯ 2' ಸಿನಿಮಾಗಳು ಸಂತೋಷ್ ಬಾಲರಾಜ್‌ಗೆ ಸಣ್ಣ ಮಟ್ಟದ ಯಶಸ್ಸನ್ನು ನೀಡಿದ್ದವು.
ಬಹುತೇಕ ತಮ್ಮದೇ ಬ್ಯಾನರ್‌ನ ಸಿನಿಮಾಗಳಲ್ಲಿ ಸಂತೋಷ್ ನಟಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸಂತೋಷ್ ಬಾಲರಾಜ್ ಅವರ ತಂದೆ ನಿರ್ಮಾಪಕ ಆನೇಕಲ್ ಬಾಲರಾಜ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಸಂತೋಷ್ ಬಾಲರಾಜ್ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರು. ಆದರೆ, ಗ್ರ್ಯಾಂಡ್ ಕಮ್ ಬ್ಯಾಕ್ ಮಾಡುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದರು.
Advertisement