
ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಸದ್ಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ 'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದೆ. ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ.
ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಜೆಪಿ ತುಮಿನಾಡ್ ನಿರ್ದೇಶಿಸೋ ಜೊತೆಗೆ ಅಭಿನಯಿಸಿದ್ದಾರೆ. ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ನಿರ್ಮಾಣ ತಂಡದಲ್ಲಿದ್ದಾರೆ.
ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್ದಾಸ್ ತಾರಾಗಣದಲ್ಲಿದ್ದಾರೆ. ಜುಲೈ 25, 2025ರಂದು ಕನ್ನಡದಲ್ಲಿ ಚಿತ್ರಮಂದಿರ ಪ್ರವೇಶಿಸಿದ 'ಸು ಫ್ರಮ್ ಸೋ' ಆಗಸ್ಟ್ 1ರಂದು ಮಲಯಾಳಂನಲ್ಲಿ, ಆಗಸ್ಟ್ 8ರಂದು ತೆಲುಗಿನಲ್ಲಿಯೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇತ್ತೀಚಿನ ಬೆಳವಣಿಗೆಯೆಂದರೆ, ಕನ್ನಡದಲ್ಲಿ 17 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿ ದಕ್ಷಿಣ ಭಾರತೀಯ ಭಾಷೆಗಳಲ್ಲಿ 60 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿ ಖ್ಯಾತಿ ಗಳಿಸಿರುವ ಎನ್.ಎಸ್.ರಾಜ್ ಕುಮಾರ್ ಅವರು, 'ಸು ಫ್ರಮ್ ಸೋ' ಚಿತ್ರದ ತಮಿಳು ರಿಮೇಕ್ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಪಡೆದುಕೊಂಡಿದ್ದಾರೆ.
ಎನ್.ಎಸ್.ರಾಜ್ ಕುಮಾರ್ ಅವರ ಚಿತ್ರ ತಂಡವು ಪ್ರಸ್ತುತ ಪಾತ್ರವರ್ಗ ಮತ್ತು ಸಿಬ್ಬಂದಿಗಳನ್ನು ಅಂತಿಮಗೊಳಿಸುವ ಕೆಲಸ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆಗಳನ್ನು ನಿರೀಕ್ಷಿಸಲಾಗಿದೆ.
ಚಿತ್ರದ ಪಾತ್ರಗಳಲ್ಲಿ ಹಾಸ್ಯ ಮಾತ್ರವಷ್ಟೇ ಅಲ್ಲ, ಮೂಲ ಸಂದೇಶವೂ ಕಂಡು ಬಂದಿದೆ. ಇದು ತಮಿಳುನಾಡಿನಲ್ಲೂ ಒಂದು ರೀತಿಯ ಪ್ರಭಾವ ಬೀರುತ್ತದೆ ಎಂಬ ನಂಬಿಕೆಯಿದೆ ಎಂದು ರಾಜ್‌ಕುಮಾರ್ ಅವರು ಹೇಳಿದ್ದಾರೆ.
Advertisement