

ಬೆಂಗಳೂರು: ನಟ ದರ್ಶನ್ ಅಭಿನಯದ ದಿ ಡೆವಿಲ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಾಲಯದ ಆದೇಶದ ಪ್ರಕಾರ, 'ದಿ ಡೆವಿಲ್' ನ ರೇಟಿಂಗ್ ಮತ್ತು ವಿಮರ್ಶೆಗಳನ್ನು BookMyShow ನಂತಹ ಕೆಲವು ವೇದಿಕೆಗಳಲ್ಲಿ ನಿಷ್ಕ್ರಿಯಗೊಳಿಸಲಾಗಿದೆ.
ನ್ಯಾಯಾಲಯದ ಆದೇಶಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ಲಭ್ಯವಾಗದಿದ್ದರೂ, ಡೆವಿಲ್ ಚಿತ್ರಕ್ಕೆ ರೇಟಿಂಗ್ಸ್ ಅಥವಾ ವಿಮರ್ಶೆ ನೀಡಲು ಅವಕಾಶವಿಲ್ಲ.
ಸಾಮಾನ್ಯವಾಗಿ ಯಾವುದೇ ಚಿತ್ರವನ್ನು ನೋಡಿದ ಬಳಿಕ ಬುಕ್ ಮೈ ಶೋ ಮೂಲಕ ರೇಟಿಂಗ್ ಮತ್ತು ವಿಮರ್ಶೆ ಬರೆಯಬಹುದು. ಕೆಲವರು ಸನಿಮಾ ಚೆನ್ನಾಗಿದ್ದರೂ ಕೂಡ ವೈಯಕ್ತಿಕ ಧ್ವೇಷದಿಂದಾಗಿ ನೆಗೆಟಿವ್ ವಿಮರ್ಶೆ ಕೊಡುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡುವುದಕ್ಕೆ ಬ್ರೇಕ್ ಹಾಕಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿತ್ರಕ್ಕಿಂತ ಹೆಚ್ಚಾಗಿ ಸದ್ಯ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಅಪ್ರಸ್ತುತ ಅಥವಾ ಕಾನೂನುಬದ್ಧವಾಗಿ ಸೂಕ್ಷ್ಮ ಚರ್ಚೆಗಳಿಗೆ ವಿಮರ್ಶೆಯಂತಹ ವಿಭಾಗಗಳ ದುರುಪಯೋಗವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಸಿನಿಮಾ ವೀಕ್ಷಿಸಿದ ಬಳಿಕ ಅನೇಕರು ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ‘ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಆ್ಯಪ್‌ನಲ್ಲಿ ತೋರಿಸಲಾಗಿದೆ.
ಈ ಕುರಿತು ಚಿತ್ರ ವೀಕ್ಷಿಸಿದ ಬಳಿಕ ದರ್ಶನ್ ಸೋದರ, ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ಆಫ್ ಮಾಡಿಸಿದ್ದೇವೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸೋ ಕೆಲಸ ಆಗುತ್ತಿದೆ. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ಆಗುತ್ತಾ ಇದೆ. ನನ್ನ ರಾಯಲ್ ಸಿನಿಮಾಗೂ ಇದೇ ಅನುಭವ ಆಗಿದೆ. ಆಗ ಬೇಕೆಂದೇ ಸಿನಿಮಾಗೆ ನೆಗೆಟಿವ್ ವಿಮರ್ಶೆ ಕೊಡಿಸಿದ್ದರು. ಅದಕ್ಕೆ ಈ ನಿರ್ಧಾರ’ ಎಂದು ಹೇಳಿದ್ದಾರೆ.
ಕೆಲವು ಅಧಿಕೃತ ವೇದಿಕೆಗಳಲ್ಲಿ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದರೂ, X ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಡೆವಿಲ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Advertisement