

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ 'ಡೆವಿಲ್' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ 'ಡೆವಿಲ್' ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಡೆವಿಲ್’ ಸಿನಿಮಾ ಮೊದಲ ದಿನ ಸುಮಾರು 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ.
ಇದು ಕರ್ನಾಟಕದ ಕಲೆಕ್ಷನ್ ಮಾತ್ರ. ವಿದೇಶದ ಗಳಿಕೆಯೂ ಸೇರಿದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸಿನಿಮಾ ಗಳಿಕೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇಷ್ಟು ದೊಡ್ಡ ಕಲೆಕ್ಷನ್ ಆಗಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ.
ಪಿವಿಆರ್, ಐನಾಕ್ಸ್ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಕಲೆಕ್ಷನ್ ಆಗಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಜನ ಇಲ್ಲದೆ ಶೋ ಕ್ಯಾನ್ಸಲ್ ಆದ ಬಗ್ಗೆಯೂ ವರದಿ ಆಗಿದೆ.
ರಿಲೀಸ್‌ಗೂ ಮುನ್ನವೇ ಬರೀ ಫ್ಯಾನ್ಸ್ ಶೋನಿಂದಲೇ 2.50 ಕೋಟಿ ರೂ. ಹಣ ಬಂದಿರುವ ಬಗ್ಗೆ ವರದಿಯಾಗಿದೆ. ಇನ್ನು, ಹೊರರಾಜ್ಯ ಮತ್ತು ವಿದೇಶದಿಂದ ಹರಿದುಬಂದಿರುವ ಗಳಿಕೆಯನ್ನು ಲೆಕ್ಕ ಹಾಕಿದರೆ, ಮೊದಲ ದಿನ ದಿ ಡೆವಿಲ್ ಸಿನಿಮಾಕ್ಕೆ ವಿಶ್ವಾದ್ಯಂತ ಅಂದಾಜು 12 ಕೋಟಿ ರೂ. ಕಲೆಕ್ಷನ್ ಆಗಿರುವ ಮಾಹಿತಿ ಸಿಕ್ಕಿದೆ.
ಕಾಂತಾರ ಚಾಪ್ಟರ್ 1 ನಂತರ ರಿಲೀಸ್ ಆಗುತ್ತಿರುವ ಸ್ಟಾರ್ ನಟರ ಸಿನಿಮಾ ಡಿ ಡೆವಿಲ್ ಆಗಿದ್ದು, ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ದಿನವೂ 900ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಮೈಸೂರಿನಲ್ಲಿ 100ಕ್ಕೂ ಹೆಚ್ಚು ಶೋಗಳು ಶಿವಮೊಗ್ಗ 28, ಹುಬ್ಬಳ್ಳಿ 37, ಕಲಬುರಗಿ 48, ಕುಂದಾಪುರ 19, ತುಮಕೂರಿನಲ್ಲಿ 19 ಶೋಗಳು ಸಿಕ್ಕಿವೆ. ಉಳಿದಂತೆ ಮಂಗಳೂರಿನಲ್ಲಿ 49 ಶೋಗಳು ಸಿಕ್ಕಿದ್ದರೂ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
14 ವರ್ಷಗಳ ಹಿಂದೆ 2011 ರಲ್ಲಿ ಇದೇ ರೀತಿ ದರ್ಶನ್ ಜೈಲಿನಲ್ಲಿದ್ದಾಗ ಬಿಡುಗಡೆಯಾಗಿದ್ದ ಸಾರಥಿ ಚಿತ್ರ 28 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ರೂ ಅಭಿಮಾನಿಗಳು ಡೆವಿಲ್ ನ್ನು ಭರ್ಜರಿಯಾಗಿ ಬರಮಾಡಿಕೊಂಡು ಚಿತ್ರ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಇದೇ ರೀತಿ ಕಲೆಕ್ಷನ್ ಮುಂದುವರೆದರೆ ಸಾರಥಿ ಕಲೆಕ್ಷನ್ ನ್ನು ಡೆವಿಲ್ ಹಿಂದಿಕ್ಕುವ ಸಾಧ್ಯತೆಯಿದೆ.
ದಿ ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೀರೋ ಮತ್ತು ವಿಲನ್ ಆಗಿ ಮಿಂಚಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸಿದ್ದು, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ರಚನಾ ರೈ, ಶರ್ಮಿಳಾ ಮಾಂಡ್ರೆ, ಹುಲಿ ಕಾರ್ತಿಕ್, ಗಿಲ್ಲಿ ನಟ, ವಿನಯ್ ಗೌಡ, ರೋಜರ್ ನಾರಾಯಣ್ ಮುಂತಾದವರು ನಟಿಸಿದ್ದಾರೆ.
Advertisement