ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ '45' ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ, ನಿರೀಕ್ಷೆ ಗರಿಗೆದರಿದೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಈ ಬಹುತಾರಾಗಣದ ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗುವ ಮುನ್ನ ಜೀ ನೆಟ್‌ವರ್ಕ್‌ನೊಂದಿಗೆ ತನ್ನ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಅಧಿಕೃತವಾಗಿ ಮಾರಾಟ ಮಾಡಿದೆ.
ನಟರಾದ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ಈ ಚಿತ್ರದ ಹಕ್ಕುಗಳು ಕನ್ನಡ ಉದ್ಯಮದಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಚಲನಚಿತ್ರಗಳು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲಿ, ಸಾಮಾನ್ಯವಾಗಿ ಥಿಯೇಟರ್‌ಗಳಲ್ಲಿ ಚಿತ್ರದ ಪ್ರದರ್ಶನದ ಬಗ್ಗೆ ವ್ಯಾಪಕ ನಿರೀಕ್ಷೆ ಇರುತ್ತದೆ. 45 ಚಿತ್ರವು ತನ್ನ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಚಿತ್ರ ಬಿಡುಗಡೆಗೂ ಮುನ್ನವೇ ಮಾರಾಟ ಮಾಡುವ ಮೂಲಕ ದೃಢ ಹೆಜ್ಜೆಯನ್ನು ಇಟ್ಟಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ವಿಶ್ವಾಸ ಮೂಡಿಸಿದೆ.
'45' ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ, Zee5 ನಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ. ಜೀ ನೆಟ್‌ವರ್ಕ್ ಸ್ಯಾಟಲೈಟ್ ಪ್ರಸಾರವನ್ನು ಸಹ ನಿರ್ವಹಿಸುತ್ತದೆ.
ಪ್ಯಾನ್-ಇಂಡಿಯಾ ಬಿಡುಗಡೆ
45 ಚಿತ್ರವು ಕ್ರಿಸ್‌ಮಸ್ ದಿನದಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜೀ ಸ್ಟುಡಿಯೋಸ್ ಉತ್ತರ ಭಾರತದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ, ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಲ್ಲಿ ಚಿತ್ರದ ವಿತರಣೆಯ ಜವಾಬ್ದಾರಿ ಹೊಂದಿದೆ. ಮೈತ್ರಿ ಮೂವಿ ಮೇಕರ್ಸ್ ತೆಲುಗು ಬಿಡುಗಡೆಯನ್ನು, ಎಜಿಎಸ್ ತಮಿಳು ಆವೃತ್ತಿಯನ್ನು ಮತ್ತು ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ತನ್ನ ವರ್ಪೂರ್ವ ಬ್ಯಾನರ್ ಮೂಲಕ ಮಲಯಾಳಂ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ಸೂರಜ್ ಪ್ರೊಡಕ್ಷನ್ಸ್ ನಿರ್ಮಿಸಿದ 45 ಚಿತ್ರದ ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭವು ವಿಭಿನ್ನವಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತವಾಗಿ ಟ್ರೇಲರ್ ಅನ್ನು ಅನಾವರಣಗೊಳಿಸಿ, ತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ, ಬೆಂಗಳೂರು ಮತ್ತು ಕರ್ನಾಟಕದ ಇತರ ಐದು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು.
Advertisement