
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡುವ ಮೂಲಕ ಹೆಸರುವಾಸಿಯಾದ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಇದೀಗ ಎವಿಆರ್ ಎಂಟರ್‌ಟೈನ್‌ಮೆಂಟ್ ಅನ್ನು ಪ್ರಾರಂಭಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ಹೊಸ ಪ್ರೊಡಕ್ಷನ್ ಹೌಸ್ ಮಹತ್ವಾಕಾಂಕ್ಷೆಯ ಎರಡು ಪ್ರಮುಖ ಯೋಜನೆಗಳನ್ನು ಘೋಷಿಸಿದೆ.
'ನಾವು ಕೆಲವು ಸಮಯದಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ, ಇದೀಗ ಪ್ರೊಡಕ್ಷನ್ ಹೌಸ್ ಮೂಲಕ ನಮ್ಮ ಪ್ರಯಾಣ ನಿಜವಾಗಿಯೂ ಪ್ರಾರಂಭವಾಗುತ್ತಿದೆ. ಈಗಾಗಲೇ ಎರಡು ಪ್ರಾಜೆಕ್ಟ್‌ಗಳು ನಮ್ಮ ಮುಂದಿದ್ದು, ಸಿಂಪಲ್ ಸುನಿ ನಿರ್ದೇಶನದ, ಕಾರ್ತಿಕ್ ಮಹೇಶ್ ನಟನೆಯ 'ರಿಚಿ ರಿಚ್' ಮತ್ತು ಸುಜಯ್ ಶಾಸ್ತ್ರಿ ಅವರೊಂದಿಗೆ '8' ಚಿತ್ರಗಳನ್ನು ಘೋಷಿಸಿದ್ದೇವೆ. ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಈ ತಿಂಗಳು ಅಧಿಕೃತವಾಗಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸದ್ಯ ಮತ್ತೊಂದು ಯೋಜನೆ ಕುರಿತು ಮಾತುಕತೆ ನಡೆಯುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಆ ಬಗ್ಗೆಯೂ ಮಾಹಿತಿ ನೀಡುತ್ತವೇ' ಎನ್ನುತ್ತಾರೆ ಅರವಿಂದ್ ವೆಂಕಟೇಶ್ ರೆಡ್ಡಿ.
ಗಥವೈಭವ ಮತ್ತು ದೇವರು ರುಜು ಮಾಡಿದನು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಿಂಪಲ್ ಸುನಿ 'ರಿಚಿ ರಿಚ್' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬಿಗ್ ಬಾಸ್ ಕನ್ನಡ ವಿಜೇತ ಕಾರ್ತಿಕ್ ಮಹೇಶ್ ನಟಿಸುತ್ತಿದ್ದಾರೆ. 'ಕಾರ್ತಿಕ್ ಮತ್ತು ನಾನು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಚರ್ಚಿಸುತ್ತಿದ್ದೆವು. ಆದರೆ, ನಮಗೆ ಸರಿಯಾದ ಯೋಜನೆ ಬೇಕಿತ್ತು. ರಿಚಿ ರಿಚ್ ಚಿತ್ರವು ಕಾಮಿಡಿ, ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಮತ್ತು ಭಾವನೆಗಳ ಮಿಶ್ರಣವಾಗಿದೆ' ಎಂದು ಸುನಿ ಹೇಳುತ್ತಾರೆ. ಕಾರ್ತಿಕ್ ರಿದ್ದೇಶ್ ಚಿನ್ನಯ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಚಿತ್ರಕ್ಕೆ ವೀರ್ ಸಮರ್ಥ್ ಅವರು ಸಂಗೀತ ಸಂಯೋಜಿಸಿದರೆ, ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.
ಈಮಧ್ಯೆ, ಎವಿಆರ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ '8' ಎಂಬ ಶೀರ್ಷಿಕೆಯ ಎರಡನೇ ಚಿತ್ರವನ್ನು 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಮತ್ತು ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಕ್ಕೆ ಹೆಸರಾದ ಸುಜಯ್ ಶಾಸ್ತ್ರಿ ನಿರ್ದೇಶಿಸಲಿದ್ದಾರೆ. ಈ ಯೋಜನೆ ಕ್ರೀಡೆಗೆ ಸಂಬಂಧಿಸಿದ್ದಾಗಿದೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಸುಜಯ್ ಭರವಸೆ ನೀಡಿದ್ದಾರೆ. 'ನಾವು ಇದರ ಬಗ್ಗೆ ಉತ್ಸುಕರಾಗಿದ್ದೇವೆ ಮತ್ತು ಸರಿಯಾದ ಸಮಯದಲ್ಲಿ ನಾವು ಚಿತ್ರದ ಪಾತ್ರವರ್ಗದ ಕುರಿತು ಮಾಹಿತಿ ನೀಡುತ್ತೇವೆ' ಎಂದು ಅವರು ಹಂಚಿಕೊಳ್ಳುತ್ತಾರೆ.
Advertisement