
ನವದೆಹಲಿ: ಚಿಕ್ಕ ವಯಸ್ಸು ಹಾಗೂ ಚಿತ್ರೋದ್ಯಮಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ 'ನ್ಯಾಷನಲ್ ಕ್ರಶ್' ಪಟ್ಟ ಗಿಟ್ಟಿಸಿಕೊಂಡ ಕರ್ನಾಟಕದ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಮೊದಲಿಗರು ಎಂದರೆ ತಪ್ಪಾಗಲಾರದು. ಸ್ಯಾಂಡಲ್ ವುಡ್ ನಿಂದ ಸಿನಿಮಾ ಕೆರಿಯರ್ ಆರಂಭಿಸಿದ ಇವರು, ಈಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿಯೂ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟಿಸಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದು, ಅಭಿಮಾನಿಗಳ ಪಾಲಿಗೆ ನೆಚ್ಚಿನ 'ನ್ಯಾಷನಲ್ ಕ್ರಶ್ ಆಗಿದ್ದಾರೆ. ಇಂತಹ ಬಿರುದು, ಬಾವಲಿಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ. ಅಭಿಮಾನಿಗಳು ತನಗೆ ನೀಡಿದ "ನ್ಯಾಷನಲ್ ಕ್ರಶ್" ಬಿರುದುಗಳ ಬಗ್ಗೆ ನನಗಿಷ್ಟವಿಲ್ಲ ಆದರೆ, ಅಭಿಮಾನಿಗಳು ನನನ್ನು ಒಬ್ಬ ಕಲಾವಿದೆಯಾಗಿ ನೋಡಬೇಕು ಅಷ್ಟೇ ಸಾಕು ಎಂದಿದ್ದಾರೆ.
ಕನ್ನಡದ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾ ಪಯಣ ಆರಂಭಿಸಿದ ರಶ್ಮಿಕಾ ಮಂದಣ್ಣ ಅವರಿಗೆ ಕೇವಲ 28 ವರ್ಷ ವಯಸ್ಸು. ಆದಾಗ್ಯೂ, ಈಗಿನ ಅತಿದೊಡ್ಡ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಮತ್ತು ಅವರ ತೆಲುಗಿನ "ಗೀತ ಗೋವಿಂದಂ", "ಡಿಯರ್ ಕಾಮ್ರೇಡ್", "ಭೀಷ್ಮ", "ಸೀತಾ ರಾಮಂ", "ವರಿಸು" ಮತ್ತು "ಪುಷ್ಪ" ಚಿತ್ರಗಳ ಯಶಸ್ಸಿನಿಂದಾಗಿ ಪ್ಯಾನ್-ಇಂಡಿಯಾ ನಟಿಯಾಗಿ ಹೆಸರು ಮಾಡಿದ್ದಾರೆ. ಒಬ್ಬ ನಟಿಯಾಗಿ, ನನ್ನ ಸಿನಿಮಾಗಳ ಮೇಲೆ ಜನರು ತೋರುವ ಪ್ರೀತಿಯೇ ಅತ್ಯಂತ ಪ್ರಮುಖವಾಗಿರುತ್ತದೆ ಎಂದು ಹೇಳಿದ್ದಾರೆ.
ಬಿರುದು, ಬಾವಲಿಗಳು, ಕೆರಿಯರ್ ನಲ್ಲಿ ನೆರವಾಗುವುದಿಲ್ಲ. ಅದು ಅಭಿಮಾನಿಗಳಿಂದ ಪ್ರೀತಿಯಿಂದ ಬರುತ್ತಿದೆ. ಅವರು ಹಾಗೆ ಕರೆಯಲು ಬಯಸುತ್ತಾರೆ ಮತ್ತು ಹಾಗೆ ಮಾಡುತ್ತಾರೆ. ಆದರೆ ಮತ್ತೆ, ಈ ಎಲ್ಲಾ ಬಿರುದುಗಳು ಕೇವಲ ಟ್ಯಾಗ್‌ಗಳಾಗಿವೆ. ನಾವು ಮಾಡುವ ಸಿನಿಮಾಗಳ ಮೇಲೆ ಅಭಿಮಾನಿಗಳ ಪ್ರೀತಿ ಸಿನಿಮಾ ಟಿಕೆಟ್ ಗಳ ಮೇಲೆ ಪರಿವರ್ತನೆ ಆಗಬೇಕು. ನನ್ನ ಸಿನಿಮಾವನ್ನು ಜನ ನೋಡಬೇಕು. ಅದು ನನಗೆ ವಿಶೇಷವಾಗಿರುತ್ತದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.
ನಿದ್ರೆಗೆ 'ಬೈ ಬೈ' ಹೇಳಿ ಡಬಲ್ ಶಿಫ್ಟ್ ಕೆಲಸಕ್ಕೂ ರೆಡಿ
2016 ರ ಕನ್ನಡದ ಕಿರಿಕ್ ಪಾರ್ಟಿ" ಚಿತ್ರದೊಂದಿಗೆ ಕೆರಿಯರ್ ಆರಂಭಿಸಿದೆ. ಆ ಸಮಯದಲ್ಲಿ ಇದೊಂದೇ ಸಿನಿಮಾ, ಬೇರೆ ಸಿನಿಮಾ ಸಿಗಲ್ಲ ಅಂದುಕೊಂಡಿದ್ದೆ. ಆದರೆ ಈಗ 24 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಲ್ಲಿ ಅನೇಕ ಪ್ರತಿಭಾವಂತ, ಸುಂದರ ಮಹಿಳೆಯರಿದ್ದಾರೆ. ಆದರೆ ನಾನು ನನ್ನದೇ ಆದ ಜರ್ನಿ ಹೊಂದಿದ್ದು, ನನ್ನ ಪ್ರೇಕ್ಷಕರು ಅಥವಾ ಹಿತೈಷಿಗಳೊಂದಿಗೆ ನಿಜವಾಗಿಯೂ ಸಂಪರ್ಕ ಹೊಂದಿದ್ದೇನೆ. ಅದನ್ನು ನಿಜವಾಗಿಯೂ ನನ್ನ ಹೃದಯಕ್ಕೆ ಹತ್ತಿರವಾಗಿಟ್ಟುಕೊಳ್ಳಲು ಬಯಸುತ್ತೇನೆ. ಸಿನಿಮಾಗಳನ್ನು ಮಾಡುತ್ತಲೇ ಇರುತ್ತೇನೆ ಎಂದು ಮಂದಣ್ಣ ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಅನಿಮಲ್ ಮತ್ತು ಪುಷ್ಪ 2 ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.
ದಕ್ಷಿಣ ಹಾಗೂ ಬಾಲಿವುಡ್ ಸಿನಿಮಾಗಳ ಆಯ್ಕೆ ನಿಜವಾಗಿಯೂ ಒಂದು ರೀತಿಯ ಸವಾಲು ಆಗಿರುತ್ತದೆ. ಕೆಲವೊಮ್ಮೆ ಏಕಕಾಲದಲ್ಲಿ ದಕ್ಷಿಣ ಹಾಗೂ ಹಿಂದಿಯ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಎಲ್ಲರೂ ಪ್ರೀತಿಸುತ್ತಾರೆ ಎಂಬುದು ನನಗೆ ಗೊತ್ತಿದೆ. ಆದ್ದರಿಂದ ನನ್ನ ನಿದ್ರೆಗೆ 'ಬೈ ಬೈ' ಎಂದು ಹೇಳಿ ಸುಮ್ಮನೆ ತಿರುಗುವುದು ನನ್ನ ಜವಾಬ್ದಾರಿಯಾಗಿದೆ. ಜನರ ಪ್ರೀತಿಗೆ ಮೊದಲ ಆದ್ಯತೆ ನೀಡುತ್ತೇನೆ. ಒಂದೇ ಸಮಯದಲ್ಲಿ ಎರಡು-ಮೂರು ಚಿತ್ರ ಶೂಟ್ ಮಾಡಿದರೂ ಪರವಾಗಿಲ್ಲ ಅನಿಸುತ್ತದೆ. ಡಬಲ್ ಶಿಫ್ಟ್ ನಲ್ಲಿಯೂ ಮಾಡುತ್ತೇನೆ ಎಂದರು.
ಹಿಂದಿ ಸಿನಿಮಾ"ಛಾವಾ' ಶುಕ್ರವಾರ ಬಿಡುಗಡೆ
ರಶ್ಮಿಕಾ ಮಂದಣ್ಣ ಅವರ ಮುಂದಿನ ಐತಿಹಾಸಿಕ ಆಕ್ಷನ್ ಆಧಾರಿತ ಹಿಂದಿ ಚಲನಚಿತ್ರ "ಛಾವಾ", ಶುಕ್ರವಾರ ಬಿಡುಗಡೆಯಾಗುತ್ತಿದೆ. ಇದರಲ್ಲಿ ಅವರು ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಸಾಂಭಾಜಿ ಮಹಾರಾಜ್ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.
Advertisement