
ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ 'ಅಂದೊಂದಿತ್ತು ಕಾಲ' ಚಿತ್ರ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರತಂಡ ಇತ್ತೀಚೆಗಷ್ಟೇ 'ಮುಂಗಾರು ಮಳೆಯಲ್ಲಿ ತಂದಲ್ಲೇ ನೀನಿಲ್ಲಿ ಪ್ರೀತಿಯ ಮುನ್ಸೂಚನೆ' ಎಂಬ ಹಾಡನ್ನು ಬಿಡುಗಡೆ ಮಾಡಿತ್ತು. ಹಾಯಾಗಿದೆ ಮತ್ತು ಜಗವೇ ನೀನು ಗೆಳತಿಯೇ ಮುಂತಾದ ಕನ್ನಡ ಗೀತೆಗಳಿಗೆ ಧ್ವನಿ ನೀಡಿರುವ ಗಾಯಕ ಸಿದ್ ಶ್ರೀರಾಮ್ ಈ ಗೀತೆಗೂ ಧ್ವನಿ ನೀಡಿದ್ದು, ಮತ್ತೊಮ್ಮೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.
ಮುಂಗಾರು ಮಳೆ ಖ್ಯಾತಿಯ ನಟ ಗಣೇಶ್ ಮತ್ತು ಪೂಜಾ ಗಾಂಧಿ ಬಿಡುಗಡೆ ಮಾಡಿದ ಈ ಟ್ರ್ಯಾಕ್ ಇದೀಗ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಹಾಡಿನ ಯಶಸ್ಸಿನ ನಂತರ, ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ಯೋಜನೆಯ ಕುರಿತು ಮಾಹಿತಿ ಹಂಚಿಕೊಂಡಿತು.
ವಿನಯ್ ರಾಜ್‌ಕುಮಾರ್ ಮಾತನಾಡಿ, ''ಮುಂಗಾರು ಮಳೆಯಲ್ಲಿ ತಂದಲ್ಲೇ ನೀನಿಲ್ಲಿ ಪ್ರೀತಿಯ ಮುನ್ಸೂಚನೆ' ಎಂಬ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಹೃದಯಸ್ಪರ್ಶಿಯಾಗಿದೆ. ನಮ್ಮ ಚಿತ್ರವು ಐದು ಅತ್ಯುತ್ತಮ ಹಾಡುಗಳನ್ನು ಒಳಗೊಂಡಿದೆ. ಪ್ರತಿಯೊಂದು ಹಾಡನ್ನು ಸಂಗೀತ ನಿರ್ದೇಶಕ ವಿ ರಾಘವೇಂದ್ರ ಅವರು ಎಚ್ಚರಿಕೆಯಿಂದ ಸಂಗೀತ ಸಂಯೋಜಿಸಿದ್ದಾರೆ. ಅಂದೊಂದಿತ್ತು ಕಾಲ ಚಿತ್ರವು ನಿರ್ದೇಶಕನ ಪ್ರಯಾಣದ ಕಥೆಯನ್ನು ಹೇಳುತ್ತದೆ. ನಿರ್ದೇಶಕ ಕೀರ್ತಿ ಅವರ ವೈಯಕ್ತಿಕ ಅನುಭವಗಳು ಮತ್ತು ಅವರ ನಿಕಟ ಸ್ನೇಹಿತರ ಅನುಭವಗಳಿಂದ ಚಿತ್ರಿಸಲಾಗಿದೆ. ಚಿತ್ರವು ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದ್ದು, ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಸುರೇಶ್ ಅವರು ಚಿತ್ರ ನಿರ್ಮಾಣ ಮಾಡಿದ್ದು, ಅವರಿಗೆ ಅವರಿಗೆ ಯಶಸ್ಸು ಸಿಗಲೆಂದು ಬಯಸುತ್ತೇನೆ. ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ ಮಾಡುವಾಗ ಅದಿತಿ ಮತ್ತು ನಾನು ಅದ್ಭುತ ದೃಶ್ಯಗಳಿಗೆ ಸಾಕ್ಷಿಯಾಗಿದ್ದೇವೆ' ಎಂದರು.
ಅದಿತಿ ಪ್ರಭುದೇವ ಮಾತನಾಡಿ, 'ಅಂದೊಂದಿತ್ತು ಕಾಲ ಎಂಬ ಶೀರ್ಷಿಕೆಯೇ ಕುತೂಹಲವನ್ನು ಹುಟ್ಟುಹಾಕುತ್ತದೆ. ಕಣ್ಣುಗಳ ಮೂಲಕವೇ ಆಳವಾದ ಭಾವನೆಗಳನ್ನು ತಿಳಿಸಲು ಅನುವು ಮಾಡಿಕೊಡುವಂತಹ ಪಾತ್ರವನ್ನು ನಿರ್ದೇಶಕ ಕೀರ್ತಿ ಮತ್ತು ನಿರ್ಮಾಪಕ ಸುರೇಶ್ ಅವರು ನನಗೆ ವಹಿಸಿದ್ದಾರೆ. ಅದೊಂದು ಸಾರ್ಥಕ ಅನುಭವವಾಗಿದೆ. ವಿನಯ್ ಜೊತೆಯಲ್ಲಿ ಕೆಲಸ ಮಾಡುವುದು ಸಂತೋಷ ನೀಡಿದೆ. ಚಿತ್ರದ ಹಾಡಿಗೆ ವ್ಯಕ್ತವಾಗಿರುವ ಪ್ರೀತಿಯಿಂದ ನಾನು ರೋಮಾಂಚನಗೊಂಡಿದ್ದೇನೆ. ರಾಘವೇಂದ್ರ ಅವರು ಸುಂದರ ಹಾಡುಗಳನ್ನು ಸಂಯೋಜಿಸಿದ್ದಾರೆ' ಎಂದು ಹೇಳಿದರು.
'ಹಾಡಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಯಿಂದಾಗಿ ಸಂತೋಷವಾಗಿದೆ ಮತ್ತು ನಿರ್ಮಾಪಕ ಭುವನ್ ಸುರೇಶ್ ಅವರಿಗೆ ನಾನು ಋಣಿಯಾಗಿದ್ದೇನೆ. ಅವರ ಅವಿರತ ಬೆಂಬಲದಿಂದ ಇದು ಸಾಧ್ಯವಾಯಿತು. ಈ ಹಾಡನ್ನು ಈಗ ಪ್ರತಿದಿನ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ ಮತ್ತು ಪ್ರತಿದಿನ 300ಕ್ಕೂ ಹೆಚ್ಚು ರೀಲ್‌ಗಳನ್ನು ಮಾಡಲಾಗುತ್ತಿದೆ. ಸಂಗೀತ ಸಂಯೋಜನೆಯು ಚಿತ್ರದ ಭಾಗವಾಗಿದೆ. ಆದರೆ, ದೃಶ್ಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ವಿನಯ್ ಮತ್ತು ಅದಿತಿ ಕೆಮಿಸ್ಟ್ರಿ ಸಖತ್ ವರ್ಕ್ ಆಗಿದೆ. ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ನಾನು ನಿಜವಾದ ಅಭಿಮಾನಿಯಾಗಿದ್ದೇನೆ' ಎಂದು ಸಂಗೀತ ನಿರ್ದೇಶಕ ವಿ ರಾಘವೇಂದ್ರ ಹೇಳುತ್ತಾರೆ.
ನಿರ್ದೇಶಕ ಕೀರ್ತಿ ಕೃಷ್ಣ ಮಾತನಾಡಿ, 'ಹಾಡಿನ ರಚನೆಯು ಒಂದು ಪ್ರಕ್ರಿಯೆಯಾಗಿದೆ ಮತ್ತು ಒಂದು ಹಂತದಲ್ಲಿ, ನಮ್ಮ ಸಂಗೀತ ಸಂಯೋಜಕರು ಸರಿಯಾದ ಮೆಲೋಡಿಯನ್ನು ಹುಡುಕಲು ಹೆಣಗಾಡುತ್ತಿದ್ದರು. ಆ ಹತಾಶೆಯ ಕ್ಷಣದಲ್ಲಿ, ಅವರು ಒಂದು ಟ್ಯೂನ್ ಅನ್ನು ಹಾಡಿದರು. ನಂತರ ಮ್ಯಾಜಿಕ್ ಸಂಭವಿಸಿತು! ಆರಂಭದಲ್ಲಿ, ನಾವು ಈ ಹಾಡಿಗೆ ಸಿದ್ ಶ್ರೀರಾಮ್ ಅವರನ್ನು ಕರೆತರಬೇಕೆಂದು ಆಶಿಸಿದ್ದೆವು. ಆದರೆ, ಅವರ ಶುಲ್ಕವು ಅಡ್ಡಿಯಾಗಿತ್ತು. ಆದರೂ, ನಿರ್ಮಾಪಕರು ಅವರನ್ನೇ ಕರೆತರಲು ನಿರ್ಧರಿಸಿದರು. ಹಾಡಿನ ಯಶಸ್ಸಿನಲ್ಲಿ ಇದು ಕೂಡ ಮಹತ್ವದ ಪಾತ್ರ ವಹಿಸಿದೆ ಎಂದು ನಾನು ನಂಬುತ್ತೇನೆ' ಎಂದರು.
ಅಂದೊಂದಿತ್ತು ಕಾಲ ಚಿತ್ರದಲ್ಲಿ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಸಹ ನಟಿಸಿದ್ದಾರೆ. ನಟ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮತ್ತು ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಈ ಚಿತ್ರವನ್ನು ಭುವನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ.
Advertisement