ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ 'ಸಲಾರ್' ರೀ-ರಿಲೀಸ್!
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರವು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಮಾರ್ಚ್ 21 ರಂದು ಮೊದಲು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರೀರಿಲೀಸ್ ಆಗಲಿದ್ದು, ಚಿತ್ರತಂಡ ನಂತರ ರಾಷ್ಟ್ರವ್ಯಾಪಿ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್‌ಗೆ ಹತ್ತಿರವಿರುವ ಮೂಲ ತಿಳಿಸಿದೆ.
'ಸಲಾರ್: ಭಾಗ 1 - ಕದನ ವಿರಾಮ' ಚಿತ್ರವು ಡಿಸೆಂಬರ್ 22 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ದೇಶದಾದ್ಯಂತ ಬಿಡುಗಡೆಯಾಗಿತ್ತು. ಇದು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 700 ಕೋಟಿ ರೂ. ಗಳಿಕೆ ಕಂಡಿತ್ತು.
ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಈ ಚಿತ್ರವು ದೇವ (ಪ್ರಭಾಸ್) ಮತ್ತು ವರ್ಧ (ಪೃಥ್ವಿರಾಜ್) ಎಂಬ ಇಬ್ಬರು ಸ್ನೇಹಿತರ ಸುತ್ತ ಸುತ್ತುತ್ತದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ಜಾನ್ ವಿಜಯ್ ಮುಂತಾದವರು ನಟಿಸಿದ್ದಾರೆ.
ಚಿತ್ರತಂಡದ ಪ್ರಕಾರ, OTT ಯಲ್ಲಿ ಚಿತ್ರದ ಯಶಸ್ಸು ಅದನ್ನು ಮತ್ತೆ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಸ್ಪೂರ್ತಿ ನೀಡಿದೆ. ಪ್ರೇಕ್ಷಕರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರೀರಿಲೀಸ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲವು ತಿಳಿಸಿದೆ.
ಸಲಾರ್‌ನ ಎರಡನೇ ಭಾಗವು ಬಹಳ ಹಿಂದಿನಿಂದಲೂ ಚರ್ಚೆಯಲ್ಲಿದೆ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಚಿತ್ರದ ಭಾಗವಾಗಿರುವುದಾಗಿ ಖಚಿತಪಡಿಸಿದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯ ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಚಿತ್ರ ನಿರ್ದೇಶನದಲ್ಲಿ ಬ್ಯುಸಿಯಾಗಿರುವುದರಿಂದ ಸಲಾರ್ ಸೀಕ್ವೆಲ್ ವಿಳಂಬವಾಗುವ ಸಾಧ್ಯತೆಯಿದೆ. ಪ್ರಶಾಂತ್-ಜೂನಿಯರ್ ಎನ್‌ಟಿಆರ್ ಚಿತ್ರದ ನಿರ್ಮಾಣವು ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ