
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ 29ನೇ ದಿನಕ್ಕೆ ಪುಷ್ಪ 2 ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1,800 ಕೋಟಿ ರೂ. ಗಡಿ ದಾಟಲು ಸಿದ್ಧವಾಗಿದೆ. ಬಿಡುಗಡೆಯಾದ ನಾಲ್ಕನೇ ವಾರದಲ್ಲಿ ಚಿತ್ರವು 1,799 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಗುರುವಾರ ಪ್ರಕಟಿಸಿದೆ.
ಅಲ್ಲು ಅರ್ಜುನ್ ಅವರ ಪುಷ್ಪ ರಾಜ್‌ನ ಹೊಸ ಪೋಸ್ಟರ್ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್, ಬಿಡುಗಡೆಯಾದ 28 ದಿನಗಳಲ್ಲಿ ಪುಷ್ಪ 2 ವಿಶ್ವದಾದ್ಯಂತ 1,799 ಕೋಟಿ ರೂ. ಕಲೆಕ್ಷನ್ ಮಾಡಿದೆ. '#Pushpa2TheRule ಭಾರತದ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಪುಷ್ಪ 2 ಬ್ಲಾಕ್‌ಬಸ್ಟರ್ 4 ವಾರಗಳಲ್ಲಿ ವಿಶ್ವದಾದ್ಯಂತ 1,799 ಕೋಟಿ ರೂ. ಗಳಿಸಿದೆ. ಈ ಮೂಲಕ ಚಿತ್ರವು ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ 2,000 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದೆ' ಎಂದಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಪುಷ್ಪ 2 ಸಿನಿಮಾ ಬಿಡುಗಡೆಯಾದ ನಾಲ್ಕನೇ ವಾರದಲ್ಲಿ 69.75 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಒಟ್ಟು ಗಳಿಕೆ 1189.85 ಕೋಟಿ ರೂ.ಗೆ ತಲುಪಿದೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ, ಯಾವುದೇ ಚಿತ್ರಗಳನ್ನು ಲೆಕ್ಕಿಸದೆ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಶಂಕರ್ ಅವರ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರ ಸಂಕ್ರಾಂತಿಯಂದು ಬಿಡುಗಡೆಯಾಗಲಿದ್ದು, ಪುಷ್ಪ 2 ಚಿತ್ರದ ಗಳಿಕೆ ಮೇಲೆ ಪರಿಣಾಮ ಉಂಟುಮಾಡಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ಡಿಸೆಂಬರ್ 4 ರಂದು ಪುಷ್ಪ 2 ಚಿತ್ರ ಪ್ರದರ್ಶನದ ವೇಳೆ ಹೈದರಾಬಾದಿನ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು ಮತ್ತು ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದರು. ನಾಂಪಲ್ಲಿ ನ್ಯಾಯಾಲಯವು 14 ದಿನಗಳ ಬಂಧನಕ್ಕೆ ಕಳುಹಿಸಿದರೆ, ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತು.
ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಹೈದರಾಬಾದ್ ಪೊಲೀಸ್ ಮುಖ್ಯಸ್ಥರಿಂದ ನಾಲ್ಕು ವಾರಗಳಲ್ಲಿ ತಾವು ಕೈಗೊಂಡ ಕ್ರಮಗಳ ಕುರಿತಾದ ವರದಿ ಕೇಳಿದೆ. ಕಾಲ್ತುಳಿತ ಪ್ರಕರಣದ ಆರೋಪಗಳನ್ನು ಹಿರಿಯ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ವಿಚಾರಣೆ ನಡೆಸಬೇಕು ಮತ್ತು ಅದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎನ್‌ಎಚ್‌ಆರ್‌ಸಿ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
Advertisement