
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ಘಟ್ಟ ತಲುಪಿದ್ದು, ಈ ವಾರ ‘ಟಿಕೆಟ್ ಟು ಫಿನಾಲೆ’ ಪಾಸ್ ಟಾಸ್ಕ್ ವೇಳೆ ನಟಿ ಭವ್ಯಾ ತಮ್ಮ ಪ್ರತಿಸ್ಪರ್ಧಿ ಹನುಮನ ಮೇಲೆ ಹಲ್ಲೆ ಮಾಡಿ ವೀಕ್ಷಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಹೌದು.. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರ ಒಬ್ಬರಿಗೆ ‘ಟಿಕೆಟ್ ಟು ಫಿನಾಲೆ’ ಪಾಸ್ ಸಿಗಲಿದೆ. ಆ ಪಾಸ್ ಪಡೆಯೋದಕ್ಕೆ ಸ್ಪರ್ಧಿಗಳ ಮಧ್ಯೆ ಜಿದ್ದಾಜಿದ್ದಿ ಆರಂಭವಾಗಿದೆ. ಈ ಮಧ್ಯೆ ಭವ್ಯಾ ಗೌಡ ವಿರುದ್ಧ ಪ್ರೇಕ್ಷಕರು ಆಕ್ರೋಶಗೊಂಡಿದ್ದಾರೆ.
‘ಟಿಕೆಟ್ ಟು ಫಿನಾಲೆ’ ಪಾಸ್ ಟಾಸ್ಕ್ ವೇಳೆ ಸಿಟ್ಟಿನಿಂದ ಹನುಮಂತನನ್ನು ಭವ್ಯಾ ಗೌಡ ಹೊಡೆದಿದ್ದಾರೆ. ಸಾಲದಕ್ಕೆ, ‘ಹನುಮಂತ ನನ್ನ ಬಟ್ಟೆ ಎಳೆದ’ ಅಂತ ಭವ್ಯಾ ಗೌಡ ಸುಳ್ಳು ಹೇಳಿದರು. ಇದರಿಂದ ವೀಕ್ಷಕರು ಭವ್ಯಾ ಗೌಡಗೆ ಛೀಮಾರಿ ಹಾಕುತ್ತಿದ್ದಾರೆ.
ಏನಿದು ಟಾಸ್ಕ್?
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ‘ಟಿಕೆಟ್ ಟು ಫಿನಾಲೆ’ ಪಾಸ್ ಟಾಸ್ಕ್ ನೀಡಲಾಗಿತ್ತು. ಅದರಂತೆ ಗಾರ್ಡನ್ ಏರಿಯಾವನ್ನ ಎರಡು ಪ್ರದೇಶವಾಗಿ ವಿಂಗಡಿಸಲಾಗಿತ್ತು. ಸುರಕ್ಷಿತ ಪ್ರದೇಶದಲ್ಲಿ ರಜತ್ ಹಾಗೂ ಅವರು ಫಿನಾಲೆಗೆ ಅರ್ಹರು ಎಂದು ಆಯ್ಕೆ ಮಾಡಿರುವ ಮೂವರಿಗೆ (ತ್ರಿವಿಕ್ರಮ್, ಮಂಜು, ಧನರಾಜ್) ಮಾತ್ರ ಸೀಮಿತವಾಗಿತ್ತು. ರಜತ್‌ರಿಂದ ‘ಟಿಕೆಟ್ ಟು ಹೋಮ್’ ಫಲಕಗಳನ್ನು ಪಡೆದ ಐವರಿಗೆ ಅಸುರಕ್ಷಿತ ಪ್ರದೇಶ ಮೀಸಲಿತ್ತು. ಅಸುರಕ್ಷಿತ ಪ್ರದೇಶದಲ್ಲಿ ಇರುವವರು ಸುರಕ್ಷಿತ ಪ್ರದೇಶಕ್ಕೆ ತೆರಳಲು ‘ಬಿಗ್ ಬಾಸ್’ ಚೆಂಡಿನ ಟಾಸ್ಕ್ ನೀಡಿದ್ದರು.
ಐವರು ತಮ್ಮ ತಮ್ಮ ಬಾಸ್ಕೆಟ್ ಬಳಿ ಬಂದು, ಚೆಂಡಿನ ಮಳೆ ಆದಾಗ ಚೆಂಡು ಸಂಗ್ರಹಿಸಿ, ಎದುರಾಳಿಗಳಿಂದ ಕಾಪಾಡಿಕೊಳ್ಳಬೇಕಿತ್ತು. ರಜತ್ ಚಿನ್ನದ ಚೆಂಡುಗಳನ್ನ ಎಸೆಯಬೇಕಿತ್ತು. ಪ್ರತಿ ಸುತ್ತಿನ ಕೊನೆಗೆ ಹೆಚ್ಚು ಚೆಂಡು/ಅಂಕಗಳನ್ನ ಪಡೆದವರು ಸುರಕ್ಷಿತ ಪ್ರದೇಶಕ್ಕೆ ತೆರಳಲು ಅರ್ಹತೆ ಪಡೆದಂತೆ.
ಸುರಕ್ಷಿತ ಪ್ರದೇಶದಲ್ಲಿ ಮೂವರಿಗೆ ಮಾತ್ರ ಇರಲು ಅರ್ಹತೆ ಇತ್ತು. ಸುರಕ್ಷಿತ ಪ್ರದೇಶದಲ್ಲಿರುವ ಮೂವರು ತಮ್ಮಲ್ಲಿಯೇ ಚರ್ಚಿಸಿ ತಮ್ಮ ಪೈಕಿ ಫಿನಾಲೆ ತಲುಪಲು ಅರ್ಹತೆ ಇಲ್ಲದ ಒಬ್ಬರನ್ನ ಅಸುರಕ್ಷಿತ ಪ್ರದೇಶಕ್ಕೆ ಕಳುಹಿಸಬೇಕಿತ್ತು. ಆ ಜಾಗಕ್ಕೆ ಅಸುರಕ್ಷಿತ ಪ್ರದೇಶದಿಂದ ಗೆದ್ದ ಒಬ್ಬರು ಎಂಟ್ರಿಕೊಡಬಹುದಿತ್ತು. ಹೀಗೆ, 5 ಸುತ್ತುಗಳಲ್ಲಿ ಟಾಸ್ಕ್ ನಡೆಯಲಿದ್ದು, 5 ಸುತ್ತುಗಳ ಬಳಿಕ ‘ಟಿಕೆಟ್ ಟು ಹೋಮ್’ ಫಲಕ ಹೊಂದಿರುವ ಐವರು ಈ ವಾರ ನಾಮಿನೇಟ್ ಆದಂತೆ. ಮೂವರು ಸೇಫ್ ಆದಂತೆ.
ಹನುಮಂತನ ಥಳಿಸಿದ ಭವ್ಯ
ಇನ್ನು ಈ ಆಟದ ಮೊದಲ ಸುತ್ತಿನಲ್ಲಿ ಭವ್ಯಾ ಗೌಡ ಗೆದ್ದರು. ಮಂಜು ಬದಲು ಭವ್ಯಾ ಗೌಡ ಸುರಕ್ಷಿತ ಪ್ರದೇಶಕ್ಕೆ ತೆರಳಿದರು. ಎರಡನೇ ಸುತ್ತಿನಲ್ಲಿ ಮಂಜು ಗೆದ್ಮೇಲೆ ಭವ್ಯಾ ಗೌಡರನ್ನು ಮಂಜು ಅನ್‌ಸೇಫ್ ಮಾಡಿದರು. ಮೂರನೇ ಸುತ್ತಿನಲ್ಲಿ ಭವ್ಯಾ ಗೌಡ ಅವರ ಬಾಸ್ಕೆಟ್‌ನಿಂದ ಚೈತ್ರಾ ಕುಂದಾಪುರ ಹಾಗೂ ಗೌತಮಿ ಜಾಧವ್ ಚೆಂಡುಗಳನ್ನ ತೆಗೆದುಕೊಂಡರು. ಆಗ ಸಿಟ್ಟಿಗೆದ್ದ ಭವ್ಯಾ ಗೌಡ, ಗೌತಮಿ ಅವರ ಬಾಸ್ಕೆಟ್‌ನಿಂದ ಚೆಂಡುಗಳನ್ನ ಬೀಳಿಸಿದರು.
ಹನುಮಂತನ ಬಾಸ್ಕೆಟ್‌ನಿಂದಲೂ ಬಾಲ್ ಬೀಳಿಸಲು ಬಂದರು. ‘‘ನಾನು ಎಳೆದಿಲ್ಲ’’ ಅಂತ ಹನುಮಂತ ಹೇಳಿದಾಗ, ‘’ನಾನು ಹಿಂಗೆ ಆಡೋದು ನನ್ನ ಸಹವಾಸಕ್ಕೆ ಬಂದರೆ’’ ಅಂತ ಭವ್ಯಾ ಕಿಡಿಕಾರಿದರು. ಆನಂತರ ಆಟದ ಮಧ್ಯೆ ಭವ್ಯಾ ಬುಟ್ಟಿನ ಹನುಮಂತ ಕಿತ್ತೆಸೆದರು. ಆಗ ರೊಚ್ಚಿಗೆದ್ದ ಭವ್ಯಾ ಗೌಡ.. ಹನುಮಂತನ ಬೆನ್ನಿಗೆ ಹೊಡೆದರು. ಕೂಡಲೆ, ‘’ಹೊಡೀತಾಯಿದ್ದಾಳೆ’’ ಅಂತ ಹನುಮಂತ ಹೇಳಿದಾಗ, ‘’ನನಗೆ ಬಟ್ಟೆ ಎಳೆದರು’’ ಅಂತ ಭವ್ಯಾ ಗೌಡ ಹೇಳಿದರು.
ಭವ್ಯಾ ವಿರುದ್ಧ ಪ್ರೇಕ್ಷರ ಆಕ್ರೋಶ
ಇನ್ನು ಭವ್ಯ ಅವರ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, 'ಪಾಪ ಬಡವರ ಮಕ್ಕಳು ಬೆಳೆಯಲು ಬಿಡಿ.. ನಿಮ್ ಸೀರಿಯಲ್ ಅವರನ್ನ ಮಾತ್ರ ಯಾಕೆ ಇಟ್ಕೊಳ್ತಿರಾ. ರಂಜಿತ್ ಜಗದೀಶ್ ಗೆ ಒಂದು ನ್ಯಾಯ, ರಜತ್ ಭವ್ಯಗೆ ಒಂದು ನ್ಯಾಯಾನಾ? ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
Advertisement