
ತುಮಕೂರಿನ ದಿಬ್ಬೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 'ಅಥಣಿ' ಚಿತ್ರದ 'ಬಾರೆ ಬಾರೆ' ಹಾಡು ಬಿಡುಗಡೆಯಾಗಿದೆ. ಅಭಯ ಖುಷಿ ಮೂವೀಸ್ ಬ್ಯಾನರ್‌ನಡಿಯಲ್ಲಿ ಕೃಷಿಕರಾದ ವಾಸುದೇವ ಆರ್ ದೊಡ್ಡಹೆಜ್ಜಾಜಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಮರ್ಥ ಎಂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ, ನಟ, ಸಂಕಲನಕಾರ ನಾಗೇಂದ್ರ ಅರಸ್ ಚಿತ್ರದ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ರಾಜು ಚಿತ್ರಾಪುರ ಬರೆದಿರುವ ಈ ಹಾಡಿಗೆ ಸ್ವಾತಿ ಶಂಕರ್ ಮತ್ತು ಹರ್ಷಿವ್ ಬಘೀರಾ ಅವರು ಧ್ವನಿಯಾಗಿದ್ದಾರೆ. ಹರ್ಷ ಕೂಗೋಡು ಸಂಗೀತ ಸಂಯೋಜಿಸಿದ್ದಾರೆ. ಅಭಯ್ ಖುಷಿ ಮ್ಯೂಸಿಕ್ ಚಾನೆಲ್‌ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿದೆ.
ಚಿತ್ರದಲ್ಲಿ ಹುಬ್ಬಳ್ಳಿ ಮೂಲದ ಮಧು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ನಾಗೇಂದ್ರ ಅರಸ್, ಶೋಭರಾಜ್, ಭವ್ಯ ಯತಿರಾಜ್, ಬಾಲ ರಾಜವಾಡಿ, ರಾಕೇಶ್ ಪೂಜಾರಿ, ಮೂರ್ತಿ, ವಿಷ್ಣುಪ್ರಿಯಾ, ಶ್ರೀನಿಧಿ, ಇಂದ್ರ ಕುಮಾರ್ ಮತ್ತು ಸಿಜಿ ದಿಬ್ಬೂರ್ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.
ರೈತರ ಬದುಕು ಬವಣೆಯ ಸುತ್ತ ಸುತ್ತುವ 'ಅಥಣಿ' ಚಿತ್ರದಲ್ಲಿ ಕ್ರೈಂ, ಲವ್, ಸಸ್ಪೆನ್ಸ್ ಮತ್ತು ಕಾಮಿಡಿ ಹೀಗೆ ಕಮರ್ಷಿಯಲ್ ಚಿತ್ರಕ್ಕೆ ಅಗತ್ಯವಿರುವ ಎಲ್ಲ ಅಂಶಗಳಿವೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಹರ್ಷ ಕೂಗೋಡು ಸಂಯೋಜಿಸಿದ್ದಾರೆ.
ಚಿತ್ರಕ್ಕೆ ಸಂದೀಪ್ ಹೊನ್ನಾಳಿ ಅವರ ಛಾಯಾಗ್ರಹಣ ಮತ್ತು ಸುನಯ್ ಜೈನ್ ಅವರ ಸಂಕಲನವಿದೆ. ತುಮಕೂರು, ಬೆಂಗಳೂರು, ರಾಮನಗರ, ಹೊನ್ನಾವರ, ಸಕಲೇಶಪುರ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರವು 'ಧರಣಿ ಮಂಡಲ ಮದ್ಯದೊಳಗೆ' ಎಂಬ ಟ್ಯಾಗ್‌ಲೈನ್ ಹೊಂದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ.
Advertisement