
ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ 2' ನ್ಯಾಯಾಲಯದ ಆದೇಶದ ನಂತರ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರವು ಜನವರಿ 10 ರಂದು ಬಿಡುಗಡೆಯಾಗಬೇಕಿತ್ತು. ಹೈದರಾಬಾದ್ ನ್ಯಾಯಾಲಯವು ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದ ನಂತರ ಇದೀಗ ಜನವರಿ 17ರಂದು ರಾಜ್ಯದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.
ಛಲವಾದಿ ಕುಮಾರ್ ನಿರ್ಮಾಣದ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆಯಿದೆ. ಚಿತ್ರವು ರೊಮ್ಯಾನ್ಸ್, ಕಾಮಿಡಿ ಅಂಶಗಳನ್ನು ಒಳಗೊಂಡಿದ್ದು, ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ನೀಡುತ್ತದೆ.
ತೆಲುಗು ನಿರ್ಮಾಪಕ ರಾಮರಾವ್ ಚಿಂತಪಲ್ಲಿ ಎಂಬುವವರ ಜೊತೆ ನಾಗಶೇಖರ್ ಅವರಿಗೆ ಹಣಕಾಸಿನ ವ್ಯವಹಾರವಿತ್ತು. ಈ ಚಿತ್ರಕ್ಕೆ ನಾಗಶೇಖರ್ ನಿರ್ಮಾಪಕ ಎಂದು ತಿಳಿದ ಅವರು ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್‌ನಲ್ಲಿ 'ಸಂಜು ವೆಡ್ಸ್ ಗೀತಾ 2' ಸಿನಿಮಾ ರಿಲೀಸ್ ಆಗದಂತೆ ಸ್ಟೇ ತಂದಿದ್ದರು.
ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವು ಮಾಡಿದೆ. 'ಸಂಜು ವೆಡ್ಸ್ ಗೀತಾ 2' ಜನವರಿ 17 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಚಿತ್ರ ಬಿಡುಗಡೆಗೆ ಎದುರಾಗಿದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಚಿತ್ರವನ್ನು ಪ್ರೇಕ್ಷಕರ ಎದುರಿಗೆ ತರಲು ನಾವು ಉತ್ಸುಕರಾಗಿದ್ದೇವೆ ಎಂದು ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಹೇಳಿದ್ದಾರೆ.
ಲವ್ ಮಾಕ್‌ಟೇಲ್‌ನ ತೆಲುಗು ರಿಮೇಕ್ 'ಗುರ್ತುಂದ ಸೀತಾಕಾಲಂ' (2022) ಚಿತ್ರವನ್ನು ನಾಗಶೇಖರ್ ನಿರ್ದೇಶಿಸಿದ್ದರು. ಈ ಚಿತ್ರದ ನಿರ್ಮಾಪಕರಾಗಿದ್ದ ಚಿಂತಪಲ್ಲಿ ಅವರು ಸಂಜು ವೆಡ್ಸ್ ಗೀತಾ 2 ಚಿತ್ರ ಬಿಡುಗಡೆಗೆ ಸ್ಟೇ ತಂದಿದ್ದರು. 'ಸಂಜು ವೆಡ್ಸ್ ಗೀತಾ 2' ಚಿತ್ರವು ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಟಿಸಿದ 2011 ರ 'ಸಂಜು ವೆಡ್ಸ್ ಗೀತಾ' ಚಿತ್ರದ ಮುಂದುವರಿದ ಭಾಗವಲ್ಲ ಎಂದು ನಾಗಶೇಖರ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.
'ನಾಗಶೇಖರ್ 'ಸಂಜು ವೆಡ್ಸ್ ಗೀತಾ 2' ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾನು ನನ್ನ ಬ್ಯಾನರ್, ಪವಿತ್ರಾ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ ಚಿತ್ರದ ನಿರ್ಮಾಣ ಮಾಡಿದ್ದು, ನಾನು ನಿರ್ಮಾಪಕನಾಗಿದ್ದೇನೆ. ಕಾನೂನು ಪ್ರಕ್ರಿಯೆಗಳ ನಂತರ, ನ್ಯಾಯಾಲಯವು ನಮ್ಮ ಚಿತ್ರದ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ' ಎಂದು ಕುಮಾರ್ ಹೇಳಿದರು.
ರೇಷ್ಮೆ ಕೃಷಿಕನ ಜೀವನದ ಸುತ್ತ ಸುತ್ತುವ 'ಸಂಜು ವೆಡ್ಸ್ ಗೀತಾ 2' ಚಿತ್ರದಲ್ಲಿ ಚೇತನ್ ಚಂದ್ರ ಮತ್ತು ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಡಿಫರೆಂಟ್ ಡ್ಯಾನಿ ಸಾಹಸ ದೃಶ್ಯ ನಿರ್ದೇಶನ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.
Advertisement