
ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಅಭಿನಯದ 'ಜಸ್ಟ್ ಮ್ಯಾರೀಡ್' ಚಿತ್ರದ 'ಕೇಳೋ ಮಚ್ಚಾ' ಎಂಬ ಪಾರ್ಟಿ ಹಾಡು ಕೊನೆಗೂ ಬಿಡುಗಡೆಯಾಗಿದೆ. ಈ ಹಾಡು ಇದೀಗ ಅಭಿಮಾನಿಗಳ ಎದೆಬಡಿತಕ್ಕೆ ತಕ್ಕ ರಿದಮ್ ನೀಡುತ್ತಾ ಮೆಚ್ಚುಗೆ ಗಳಿಸುತ್ತಿದೆ. ಈ ಹಾಡನ್ನು ನಟ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.
'ಕೇಳೋ ಮಚ್ಚಾ' ಒಂದು ರೋಮಾಂಚಕ ಮತ್ತು ಗೀಳು ಹಚ್ಚಿಸುವ ಗೀತೆಯಾಗಿದ್ದು, ಅದು ಪ್ರತಿಯೊಬ್ಬರಿಗೂ ಇಷ್ಟವಾಗುವ ಭರವಸೆಯನ್ನು ನೀಡುತ್ತದೆ. ಈ ಹಾಡಿಗೆ ಡೈನಾಮಿಕ್ ನಕಾಶ್ ಅಜೀಜ್ ಧ್ವನಿಯಾಗಿದ್ದು, ನಾಗಾರ್ಜುನ್ ಶರ್ಮಾ ಅವರ ಪಂಚ್ ಸಾಹಿತ್ಯವಿದೆ. ಪ್ರತಿಭಾವಂತ ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯೊಂದಿಗೆ ಹಾಡಿಗೆ ಮತ್ತಷ್ಟು ಜೀವ ಬಂದಂತಾಗಿದೆ. ಯಾವುದೇ ರೀತಿಯ ಆಚರಣೆಗಳಲ್ಲೂ ಈ ಹಾಡು ಇಲ್ಲದೆ ಅಪೂರ್ಣ ಎನಿಸುವಂತೆ ಮಾಡಲಿದೆ.
ಜಸ್ಟ್ ಮ್ಯಾರೀಡ್ ಒಂದು ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ಶೈನ್ ಶೆಟ್ಟಿ, ಅಂಕಿತಾ ಅಮರ್ ಜೊತೆಗೆ ಶ್ರುತಿ ಹರಿಹರನ್, ದೇವರಾಜ್, ಶೃತಿ ಕೃಷ್ಣ, ಅನೂಪ್ ಭಂಡಾರಿ, ರವಿಶಂಕರ್ ಗೌಡ, ರವಿ ಭಟ್, ಶ್ರೀಮನ್, ಸಾಕ್ಷಿ ಅರರ್ವಾಲ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಜಸ್ಟ್ ಮ್ಯಾರೀಡ್ ಚಿತ್ರದ ಕಥೆಯನ್ನು ಸಿಆರ್ ಬಾಬಿ ಬರೆದಿದ್ದಾರೆ. ಧನಂಜಯ್ ಜೊತೆಗೆ ಚಿತ್ರಕಥೆಯನ್ನು ಸಹ ಬರೆದಿರುವ ಅವರು, ಚಿತ್ರ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರದ ಸಂಭಾಷಣೆಯನ್ನು ರಘು ನಿಡುವಳ್ಳಿ ಬರೆದಿದ್ದಾರೆ. ಎಬಿಬಿಎಸ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿಆರ್ ಬಾಬಿ ಮತ್ತು ಬಿ ಅಜನೀಶ್ ಲೋಕನಾಥ್ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರವು ಆರು ಹಾಡುಗಳನ್ನು ಒಳಗೊಂಡಿದ್ದು, ಪ್ರತಿಯೊಂದೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಒಳಗೊಂಡಿವೆ. ಪಿಜಿ (ಪಾರ್ತಿಬನ್) ಮತ್ತು ಆಶಿಕ್ ಕುಸುಗೋಳ್ ಛಾಯಾಗ್ರಹಣವನ್ನು ನಿರ್ವಹಿಸಿದ್ದು, ಅಮರ್ ಕಲಾ ನಿರ್ದೇಶನವನ್ನು ನೋಡಿಕೊಳ್ಳುತ್ತಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ವಿಕ್ರಮ್ ಮೋರ್, ಸಾಹಸ್, ಬಾಬಾ ಭಾಸ್ಕರ್ ಮತ್ತು ಶಾಂತಿ ಅರವಿಂದ್ ಸಂಯೋಜನೆ ಮಾಡಿದ್ದಾರೆ.
Advertisement