
ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿರುವ ಅಣ್ಣಯ್ಯ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಟನೆಯ ಅಪಾಯವಿದೆ ಎಚ್ಚರಿಕೆ ಚಿತ್ರ ಫೆ.28ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
'ಅಪಾಯವಿದೆ ಎಚ್ಚರಿಕೆ' ಚಿತ್ರ ವಿಭಿನ್ನ ಕಥೆಯ ಹಾರರ್ ಥ್ರಿಲ್ಲರ್ ಚಿತ್ರವಾಗಿದ್ದು, ಕೆಲ ದಿನಗಳ ಹಿಂದಷ್ಟೇ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗುವಂತೆ ಮಾಡಿತ್ತು. ನಂತರ ಬಿಡುಗಡೆಯಾದ "ಬ್ಯಾಚುಲರ್ ಬದುಕು" ಎನ್ನುವ ಗೀತೆ. ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿತ್ತು. ಚಿತ್ರದ ಟೀಸರ್ ಕೂಡ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಇದೀಗ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿದೆ. ವಿಕಾಸ್ ಉತ್ತಯ್ಯ ಅವರು ಚಿತ್ರದಲ್ಲಿ ಸೂರಿ ಪಾತ್ರದ ಮೂಲಕ ಕಾಣಿಸಿಕೊಂಡಿದ್ದು, ಈ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದಾರೆ.
ಚಿತ್ರದಲ್ಲಿ ರಾಧಾ ಭಗವತಿ (ಅಮೃತಧಾರೆ ಖ್ಯಾತಿಯ ನಟಿ), ರಾಘವ್ ಕೊಡಚಾದ್ರಿ ಮತ್ತು ಮಿಥುನ್ ತೀರ್ಥಹಳ್ಳಿ ಕೂಡ ನಟಿಸಿದ್ದಾರೆ. ಯಶಸ್ವಿನಿ ಕ್ರಿಯೇಷನ್ಸ್ ಅಡಿಯಲ್ಲಿ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಸುನಾದ ಗೌತಮ್ ಸಂಗೀತ ಮತ್ತು ಛಾಯಾಗ್ರಹಣವನ್ನು ನೀಡಿದ್ದಾರೆ.
ಚಿತ್ರವು ಭೂಮಿ, ಗಾಳಿ, ನೀರು, ಬೆಂಕಿ ಮತ್ತು ಆಕಾಶ ಎಂಬ ಐದು ಅಂಶಗಳ ಸಾರವನ್ನು ಪರಿಶೋಧಿಸಲಿದೆ. ಟೀಸರ್'ನಲ್ಲಿ ದೃಶ್ಯಗಳು, ಮ್ಯೂಸಿಕ್ ಕುತೂಹಲ ಮೂಡಿಸಿದ್ದು, ಆಸನದ ತುದಿಯಲ್ಲಿ ಕುಳಿತು ನೋಡುವ, ಪ್ರೇಕ್ಷಕರಿಗೆ ಮನರಂಜನೆ ಒದಗಿಸುವ ಭರವಸೆ ನೀಡಿದೆ.
Advertisement