
ಎಸ್ ನಾರಾಯಣ್ ನಿರ್ದೇಶನದ, ನಟ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾರುತ’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಈಶಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆ ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಧಾರವಾಡ, ಕೂಡಲ ಸಂಗಮ, ಸವದತ್ತಿ, ಬೆಳಗಾವಿ ಮತ್ತು ಗೋವಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಸಲಾಗಿದ್ದು, ಚಿತ್ರೀಕರಣ ಇದೀಗ ಪೂರ್ಣಗೊಂಡಿದೆ.
ಎಸ್ ನಾರಾಯಣ್ ಹಾಗೂ ದುನಿಯಾ ವಿಜಯ್ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಈ ಹಿಂದೆ ಇವರಿಬ್ಬರು ಒಟ್ಟಾಗಿ ‘ಚಂಡ’, ‘ದಕ್ಷ’ ಚಿತ್ರಗಳನ್ನು ನೀಡಿದ್ದರು.
ಶ್ರೇಯಸ್ ಕೆ ಮಂಜು ಕೂಡ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಕೆ.ಮಂಜು ಹಾಗೂ ರಮೇಶ್ ಯಾದವ್ ಬಂಡವಾಳ ಹೂಡಿದ್ದಾರೆ. ಚಿತ್ರದ ನಾಯಕಿ ಬೃಂದಾ ನಟಿಸಿದ್ದಾರೆ.
‘ಮಾರುತ’ ಕಂಟೆಂಟ್ ಆಧಾರಿತ ಚಿತ್ರವಾಗಿದ್ದು, ಸಾಮಾನ್ಯರ ಕಥೆಯನ್ನು ಹೊಂದಿದೆ. ಪ್ರತಿ ಮನೆಯಲ್ಲಿ ನಡೆಯುವ ಘಟನೆಗಳೇ ಚಿತ್ರವಾಗಿದೆ. ನಮಗೆ ಗೊತ್ತಿಲ್ಲದ ಹಾಗೆ ನಮ್ಮನ್ನೆಲ್ಲ ಅವರಿಸಿಕೊಂಡಿರುವ ಭೂತ ಈ ಮಾರುತ. ಅದರಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳೇನು? ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ ಮೊದಲಾದವರು ಚಿತ್ರದಲ್ಲಿದ್ದು, ವಿಶೇಷಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಚಿತ್ರಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನವಿದೆ.
Advertisement