
ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ಕಾಲಿವುಡ್ ನಟ ಧನುಷ್ ನಡುವಿನ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.
ಈ ಹಿಂದೆ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ನಯನತಾರಾ ಅವರ ಜೀವನದ ಕುರಿತ ಸಾಕ್ಷ್ಯಚಿತ್ರ 'ನಯನತಾರಾ ಬಿಯಾಂಡ್ ದಿ ಫೇರಿ ಟೇಲ್' ನಲ್ಲಿ ನಟ ಧನುಷ್ ನಿರ್ಮಾಣದ 'ನಾನುಮ್ ರೌಡಿ ದಾನ್' (ನಾನೂ ರೌಡಿನೇ) ಚಿತ್ರದ ಕ್ಲಿಪ್ ಗಳನ್ನು ನಿರ್ಮಾಣ ಸಂಸ್ಥೆಯ ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿತ್ತು. ಇದರ ವಿರುದ್ಧ ನಟ ಧನುಷ್ ಕಾನೂನು ಸಮರ ಸಾರಿದ್ದರು. ಈ ವಿಚಾರ ನಟ ಧನುಷ್ ಮತ್ತು ನಟಿ ನಯನತಾರಾ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದೀಗ ಈ ಕಾನೂನು ಸಮರದಲ್ಲಿ ನಟ ಧನುಷ್ ಮುನ್ನಡೆ ಸಾಧಿಸಿದ್ದಾರೆ.
ಹೌದು.. ಈ ಪ್ರಕರಣದಲ್ಲಿ ನೆಟ್ ಫ್ಲಿಕ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಇದರಿಂದ ನಯನತಾರಾ ಕಾನೂನು ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ. ಈ ಹಿಂದೆ ನೆಟ್ ಫ್ಲಿಕ್ಸ್ ಸಂಸ್ಥೆ ನಟ ಧನುಷ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಮೊಕದ್ದಮೆಯನ್ನು ತಿರಸ್ಕರಿಸುವಂತೆ ನೆಟ್‌ಫ್ಲಿಕ್ಸ್ ಇಂಡಿಯಾ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಇಂದು ಅವರ ಅರ್ಜಿಯನ್ನು ವಜಾಗೊಳಿಸಿದೆ.
ಮುಂಬೈ ಮೂಲದ ಸಂಸ್ಥೆ ವಿರುದ್ಧವೂ ಧನುಷ್ ಕೇಸ್
ಇನ್ನು ಧನುಷ್ ಅವರ ವಂಡರ್ಬರ್ ಫಿಲ್ಮ್ಸ್ ಪ್ರೈವೇಟ್ ಕೂಡ ತಮಿಳುನಾಡಿನಲ್ಲಿ ಮುಂಬೈ ಮೂಲದ ಕಂಪನಿ ಲಾಸ್ ಗ್ಯಾಟೋಸ್ ಪ್ರೊಡಕ್ಷನ್ ಸರ್ವೀಸಸ್ ಇಂಡಿಯಾ ಎಲ್‌ಎಲ್‌ಪಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ, ಇದು ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಕಟೆಂಟ್ ಹೂಡಿಕೆಗಳನ್ನು ವರದಿ ಮಾಡುವ ಒಂದು ಘಟಕವಾಗಿದೆ.
Advertisement