
ಉದ್ಯಮಿ ಮತ್ತು ರಾಜಕಾರಣಿ ಜಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ, ಬಹುನಿರೀಕ್ಷಿತ ಚಿತ್ರ ಜೂನಿಯರ್ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮೂರು ವರ್ಷಗಳ ನಿರ್ಮಾಣದ ನಂತರ, ಈ ಚಿತ್ರವು ಜುಲೈ 18 ರಂದು ಯುವ ರಾಜ್‌ಕುಮಾರ್ ನಟನೆಯ ಎಕ್ಕ ಚಿತ್ರದ ಜೊತೆಗೆ ಬಿಡುಗಡೆಯಾಗಲು ಸಜ್ಜಾಗಿದೆ.
ಚಿತ್ರ ಬಿಡುಗಡೆಗೂ ಮುನ್ನ, ಚಿತ್ರತಂಡ ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಿದ್ದು, ಇದು ಮಾಸ್ ಮತ್ತು ಕ್ಲಾಸ್ ಅಂಶಗಳನ್ನು ಸಂಪೂರ್ಣವಾಗಿ ಸಂಯೋಜಿಸಿದೆ. ಶಕ್ತಿಯುತ ಸಂಭಾಷಣೆಗಳು, ತೀವ್ರವಾದ ಆ್ಯಕ್ಷನ್ ಸನ್ನಿವೇಶಗಳು ಮತ್ತು ಪ್ರಭಾವಶಾಲಿ ನೃತ್ಯದ ಮೂಲಕ ಕಿರೀಟಿ ಅವರು ಎಂಟ್ರಿ ನೀಡುತ್ತಿದ್ದು, ಅವರ ಅಭಿನಯವು ಭರವಸೆ ಮೂಡಿಸುವಂತಿದೆ.
ಕಿರೀಟಿ ಜೊತೆಗೆ, ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ದೇಶಮುಖ್ (ಅವರ ಸಹೋದರಿಯಾಗಿ ನಟಿಸಿದ್ದಾರೆ) ಮತ್ತು ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಮಾಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದು, ಪೀಟರ್ ಹೆನ್ ಅವರ ಸಾಹಸ ಸಂಯೋಜನೆಯಿದೆ.
ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ, ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಮತ್ತು ನಿರಂಜನ್ ದೇವರಮನೆ ಅವರ ಸಂಕಲನವಿದೆ. ಸಾಯಿ ಕೊರ್ರಪತಿ ಅವರ ವಾರಾಹಿ ಚಲನ ಚಿತ್ರಂ ನಿರ್ಮಿಸಿರುವ ಜೂನಿಯರ್ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Advertisement