"ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಹಿಟ್ ಆಗುತ್ತಾ?": ತಾಯಿ-ಮಗನ ನಡುವೆ ಬಿರುಕು? ಪುಷ್ಪ ಅರುಣ್ ಕುಮಾರ್ ಹೇಳಿದ್ದೇನು?

ನನ್ನ ಮಗ ಎಂದಾಕ್ಷಣ ಅವನು ನನ್ನ ಮಾತು ಕೇಳಬೇಕು ಎಂದೇನಿಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ.
Pushpa Arun Kumar
ಪುಷ್ಪಾ ಅರುಣ್ ಕುಮಾರ್
Updated on

ಪೃಥ್ವಿ ಅಂಬಾರ್ ನಟಿಸಿರುವ, ರಾಕಿಂಗ್​​ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣ ಮಾಡಿರುವ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್ 1 ರಂದು ಬಿಡುಗಡೆಗೆ ಸಜ್ಜಾಗಿದೆ.

ಈ ನಡುವೆ ಚಿತ್ರದ ಪ್ರಚಾರ ಪ್ರಾರಂಭಿಸುವ ಮೊದಲು ಪುಷ್ಪಾ ಅರುಣ್ ಕುಮಾರ್ ಹಾಗೂ ಅವರ ಚಿತ್ರ ತಂಡ ಇತ್ತೀಚೆಗೆ ಡಾ. ರಾಜ್‌ಕುಮಾರ್ ಅವರ ಸ್ಮಾರಕಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪಾ ಅರುಣ್ ಕುಮಾರ್ ಅವರು, ಈ ಸ್ಥಳ ಆಳವಾದ ಗೌರವನ್ನು ಸಂಕೇಸುತ್ತದೆ. ಈ ಸ್ಥಳ ನಮಗೆ ದೇವಸ್ಥಾನ ಇದ್ದಂತೆ. ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗದ ಆತ್ಮ. ಪುನೀತ್​ ರಾಜ್​​​ಕುಮಾರ್​ ನಮ್ಮ ಮನೆಮಗ ಇದ್ದಂತೆ. ಆದರೆ, ದೇವರ ಆಟ, ವಿಧಿ... ಏನೂ ಮಾಡೋಕೆ ಆಗಲ್ಲ. ಪಾರ್ವತಮ್ಮನವರ ಆಶೀರ್ವಾದ ಇದೆ. ಯಶ್​​ಗೆ 5 ತಿಂಗಳಾದಾಗ ಅನುರಾಗ ಅರಳಿತು ಸಿನಿಮಾ ತೋರಿಸಿದ್ದೆ. ನಮ್ಮ ಮೊಮ್ಮಗನಿಗೆ ಕಸ್ತೂರಿ ನಿವಾಸದ ಹೊಸ ಪ್ರಿಂಟ್ ತೋರಿಸಿದ್ದೇನೆ. ರಾಜ್​ಕುಮಾರ್ ಮೇಲೆ ನಮ್ಮ ಕುಟುಂಬ ದೊಡ್ಡ ಅಭಿಮಾನ ಹೊಂದಿದೆ ಎಂದು ಹೇಳಿದರು.

ಈ ನಡುವೆ ಮಾಧ್ಯಮದವರು ಕೇಳಿದ ಕೆಲ ಪ್ರಶ್ನೆಗಳಿಗೆ ಪುಷ್ಪಾ ಅವರು ನೀಡಿದ ಉತ್ತರಗಳು, ತಾಯಿ ಮತ್ತು ಮಗನ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಗಳು ಹುಟ್ಟುವಂತೆ ಮಾಡಿತು. ಮಾಧ್ಯಮಗಳ ಪ್ರಶ್ನೆ ವೇಳೆ 'ಯಶ್‌.. ಯಶ್‌.. ಅನ್ನೋದಾದ್ರೆ ಅವನ ಹತ್ತಿರವೇ ಹೋಗಿ' ಎಂದು ಗರಂ ಆದರು.

ಹೋಗಿ ಯಶ್‌ ಹತ್ರಾನೇ ಪ್ರಶ್ನೆ ಕೇಳಿ, ನಾನು ಯಶ್‌ ಬಗ್ಗೆ ಏನೂ ಹೇಳಲ್ಲ. ಯಶ್‌ ನಿಮಗೆ ಮಾತ್ರವಲ್ಲ, ನಮಗೂ ಸಿಗಲ್ಲ ಎಂದು ಹೇಳಿದರು.

ಅಮ್ಮನ ಮೊದಲ ಸಿನಿಮಾ ಬರ್ತಿದೆ ಅನ್ನೋ ಸೆಂಟಿಮೆಂಟ್‌ ಎಲ್ಲ ನಮ್ಮ ಮನೇಲಿ ಇಟ್ಟುಕೊಂಡಿಲ್ಲ. ನಾವು ಮನೆ ಕಟ್ಟಿದ ಮೇಲೆ ಯಶ್‌ ಇಲ್ಲ ಎಂದರೂ ಗೃಹಪ್ರವೇಶ ಮಾಡ್ತೀವಿ ಎಂದು ಖಡಕ್‌ ಆಗಿ ಹೇಳಿದರು.

Pushpa Arun Kumar
ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ 'ಕೊತ್ತಲವಾಡಿ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಚಿತ್ರ ಬಿಡುಗಡೆಯಾಗುವ ಮೊದಲ ದಿನದ ಮೊದಲ ಪ್ರದರ್ಶನವನ್ನಾದರೂ ನೋಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದನ್ನು ಅವರನ್ನೇ ಹೋಗಿ ಕೇಳಿ. ನಾನು ನಿಮ್ಮನ್ನು ಆಹ್ವಾನಿಸಿದಾಗ ನೀವು ಬರದಿದ್ದರೆ, ನಾನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಈ ವೇಳೆ ವರದಿಗಾರರು ಯಶ್ ನಿಮ್ಮ ಮಗ ಎಂದು ಹೇಳಿದಾಗ ಮಗ ಎಂದಾಕ್ಷಣ ಅವನು ನನ್ನ ಮಾತು ಕೇಳಬೇಕು ಎಂದೇನಿಲ್ಲ. ನಮ್ಮ ಮನೆಯಲ್ಲಿ ಅಂತಹ ಯಾವುದೇ ನಿಯಮಗಳಿಲ್ಲ. ನಮ್ಮ ಚೊಚ್ಚಲ ಸಿನಿಮಾವನ್ನು ಯಶ್‌, ರಾಧಿಕಾ ಯಾರಿಗೂ ತೋರಿಸುವುದಿಲ್ಲ. ಈ ಸಿನಿಮಾ ನೋಡ್ತಾರೋ ಬಿಡ್ತಾರೋ ಅನ್ನೋದನ್ನ ಅವರ ಬಳಿಯೇ ಕೇಳಿ. ಇಲ್ಲಿ ಮಗ ಬೇರೆ, ಅಮ್ಮ ಬೇರೆ, ಎಲ್ಲವೂ ಬೇರೆ ಬೇರೆ ಎಂದು ತಿಳಿಸಿದರು.

'ಯಶ್‌ ನಮ್ಮ ಸಿನಿಮಾ ನೋಡ್ತಾನೋ, ನೋಡಲ್ವೋ ನಾನು ನಿರೀಕ್ಷೆ ಮಾಡಲ್ಲ. ಪ್ರೇಕ್ಷಕರು ನೋಡಬೇಕು. ಯಶ್‌ ನೋಡಿದ ತಕ್ಷಣ ಸಿನಿಮಾ ಹಿಟ್ ಆಗುತ್ತಾ? ನನ್ನ ಹಣ ವಾಪಸ್‌ ಬರುತ್ತಾ? ಇಲ್ಲಿ ನನಗೆ ಮಗನ ಅಭಿಪ್ರಾಯ ಬೇಕಾಗಿಲ್ಲ, ಪ್ರೇಕ್ಷಕರ ಅಭಿಪ್ರಾಯ ಮುಖ್ಯ. ಯಶ್‌ ಒಬ್ಬನಿಂದ ಸಿನಿಮಾ ಓಡಲ್ಲ, ನನ್ನ ಹಣ ಮತ್ತೆ ಬರಲ್ಲ. ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾ ಅವರ ಅಭಿಮಾನಿಗಳೇ, ಎಲ್ಲರೂ ಬಂದು ಸಿನಿಮಾ ನೋಡಲಿ. ಅವರ ಪ್ರತಿಕ್ರಿಯೆ ಮುಖ್ಯ.

Pushpa Arun Kumar
ಯಶ್‌ ತಾಯಿ ಎಂಬ ಕಾರಣಕ್ಕೆ ಜನ ಸಿನಿಮಾ ನೋಡಲ್ಲ; ಡ್ರೈವರ್‌ ಅರುಣ್‌ ಕುಮಾರ್‌ ಹೆಂಡತಿಯಾಗಿ ಚಿತ್ರರಂಗಕ್ಕೆ ಬರ್ತಿದ್ದೇನೆ: ಪುಷ್ಪಾ

ಇತ್ತೀಚೆಗೆ ಯಶ್ ಜೊತೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ. ನಾವು ಮಾತನಾಡಿಲ್ಲ. ಅವನಿಗೆ ಈಗ ಹೆಂಡತಿ ಇದ್ದಾಳೆ. ನಾನು ಅವನ ಜೊತೆಯೇಕೆ ಮಾತನಾಡಬೇಕು? ಅವನು ಮದುವೆಯಾದ ಮೇಲೆ ನನ್ನ ಪಾತ್ರ ಮುಗಿಯಿತು. ಅವಳೇ ಎಲ್ಲವನ್ನೂ ನಿಭಾಯಿಸಬೇಕು ಎಂದರು.

ಯಶ್ ನಟಿಸಿರುವ ರಾಮಾಯಣ ಚಿತ್ರ ಕುರಿತ ಪ್ರಶ್ನೆಗೆ ಉತ್ತರಿಸಿ, ಕನ್ನಡದಲ್ಲೂ ಅಂತಹ ದೊಡ್ಡ ಬ್ಯಾನರ್‌ಗಳು ಬರಬೇಕು. ನಾನು ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ, ನಟರು ನಟನೆ ಮಾಡಬೇಕು. ನಿರ್ದೇಶಕರು ಡೈರೆಕ್ಟ್‌ ಮಾಡಬೇಕು. ನಾವು ಬರೀ ಸಿನಿಮಾಗೆ ಹಣ ಹಾಕೋದಷ್ಟೇ. ಈ ಹಿಂದೆಯೂ ನನ್ನ ನಟಿಸಲು ತುಂಬಾ ಜನ ಕೇಳಿದ್ದರು. ಆದರೆ, ನಾನು ಒಪ್ಪಲಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com