
ಬೆಂಗಳೂರು: ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಕ್ವೀನ್ಸ್ ಪ್ರೀಮಿಯರ್ ಲೀಗ್(QPL)ನ ಎರಡನೇ ಆವೃತ್ತಿಯ 'ಕ್ರೀಡೋತ್ಸವ' ಲೋಗೋವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದರು.
ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಗಳ ಬಳಿಕ, ಎರಡನೇ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದೆ.
ನಟಿ ಮತ್ತು QPL ಅಂಬಾಸಿಡರ್ ರಮ್ಯಾ, QPL ಸಂಸ್ಥಾಪಕ ಮಹೇಶ್ ಗೌಡ ಮತ್ತು ನಟ ಹಾಗೂ ಸಮಿತಿ ಸದಸ್ಯ ಪ್ರಮೋದ್ ಶೆಟ್ಟಿ ಅವರೊಂದಿಗೆ ಲೋಗೋವನ್ನು ಅನಾವರಣಗೊಳಿಸಿದರು. ಬಾಲಿವುಡ್ ನಟಿ ಎಲಿ ಎವ್ರಾಮ್ ಕೂಡಾ ತಮ್ಮ ಬೆಂಬಲ ಸೂಚಿಸಲು ಆಗಮಿಸಿದ್ದರು. ಕ್ರೀಡೆ, ಫ್ಯಾಷನ್ ಮತ್ತು ಚಲನಚಿತ್ರ ಲೋಕದ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ಗೌಡ, ''ನಾವು ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನಾ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ. ಈ ಸೀಸನ್ನಲ್ಲಿ ನಾವು 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿ ಹೊಂದಿದ್ದೇವೆ. ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ. ಇಂದು ಯುವಕರು ಮೊಬೈಲ್ ಗೇಮಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ಸಿಲುಕುತ್ತಿರುವುದನ್ನು ನೋಡಿ ಚಿಂತೆಗೊಳಗಾಗಬೇಕಾಗಿದೆ. ಸಿನಿ ತಾರೆಯರು ತಾವು ಫಿಟ್ ಆಗಿ ಉಳಿಯಲು ಕ್ರೀಡೆಗೆ ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆ. ನಿಜವಾದ ಸಬಲೀಕರಣ ನಿಜವಾದ ಭಾಗವಹಿಸುವಿಕೆಯಿಂದ ಶುರುವಾಗುತ್ತದೆ'' ಎಂದರು.
ಬಳಿಕ ಮಾತನಾಡಿದ ರಮ್ಯಾ, ''ಕ್ಯೂಪಿಎಲ್ ಮಹಿಳಾ ಕಲಾವಿದರನ್ನು ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾನೇ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜೊತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮ್ಮ ದೈಹಿಕ ಆರೋಗ್ಯಕ್ಕೆ ಸಹಕಾರಿ ಮತ್ತು ಆನ್‌ಲೈನ್ ಗೇಮಿಂಗ್, ಸೋಷಿಯಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯೂಪಿಎಲ್‌ನೊಂದಿಗೆ ನನ್ನ ಸಹಯೋಗ ಸಂತೋಷ ತಂದಿದೆ'' ಎಂದು ತಿಳಿಸಿದರು.
"QPL ಕೇವಲ ಒಂದು ಲೀಗ್‌ಗಿಂತ ಹೆಚ್ಚಿನದಾಗಿದೆ. ಇದು ಸಿನೆಮಾ, ಕ್ರೀಡೆ ಮತ್ತು ಕಾರ್ಪೊರೇಟ್ ಬೆಂಬಲಿಗರನ್ನು ಒಟ್ಟುಗೂಡಿಸುತ್ತದೆ, ಮಹಿಳೆಯರ ಭಾಗವಹಿಸುವಿಕೆ ಮತ್ತು ಫಿಟ್‌ನೆಸ್ ಅನ್ನು ಉತ್ತೇಜಿಸುತ್ತದೆ" ಎಂದು ಪ್ರಮೋದ್ ಶೆಟ್ಟಿ ಹೇಳಿದರು.
Advertisement