
ಬೆಳಗಾವಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಸಂಜು ಬಸಯ್ಯ ಪತ್ನಿ ಪಲ್ಲವಿ ಅವರಿಗೆ ಯುವಕನೋರ್ವ ಅಶ್ಲೀಲ ಸಂದೇಶ ರವಾನಿಸಿ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ಕನ್ನಡ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಯಾಗಿರುವ ಹಾಸ್ಯಕಲಾವಿದ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿ ಅವರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಯುವಕನೋರ್ವ ಅಶ್ಲೀಲ ಸಂದೇಶಗಳನ್ನು ರವಾನಿಸಿ ವಿಕೃತಿ ಮೆರೆದಿದ್ದಾನೆ. ಮೂಲಗಳ ಪ್ರಕಾರ ವಿಜಯನಗರ ಜಿಲ್ಲೆಯ ಪಿಯುಸಿ ಓದುವ ವಿದ್ಯಾರ್ಥಿಯೊಬ್ಬ ಪಲ್ಲವಿ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ ಎನ್ನಲಾಗಿದೆ.
ಪೊಲೀಸರಿಗೆ ಮಾಹಿತಿ ನೀಡಿದ್ದ ಸಂಜು ಬಸಯ್ಯ
ಇನ್ನು ತಮ್ಮ ಪತ್ನಿಗೆ ಅಶ್ಲೀಲ ಸಂದೇಶ ಬರುತ್ತಿರುವ ಕುರಿತಂತೆ ಹಾಸ್ಯ ನಟ ಸಂಜು ಬಸಯ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಪೊಲೀಸರು ವಿಜಯನಗರ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿದ್ಯಾರ್ಥಿ ಭವಿಷ್ಯ ಹಾಳಾಗಬಾರದು ಎಂದ ಹಾಸ್ಯನಟ
ಇನ್ನು ಆರೋಪಿ ಸಿಕ್ಕ ಕೂಡಲೇ ಸ್ಥಳಕ್ಕೆ ಹಾಜರಾದ ಸಂಜು ಬಸಯ್ಯ ಅವರು ವಿದ್ಯಾರ್ಥಿಗೆ ಬೈದು ಬುದ್ಧಿ ಹೇಳಿದ್ದಾರೆ. ಅಲ್ಲದೆ ಆತನ ಪೂರ್ವಾಪರ ವಿಚಾರಿಸಿದ ನಟ ಸಂಜು ಬಸಯ್ಯ ಆತ ವಿದ್ಯಾರ್ಥಿ ಎಂದು ತಿಳಿದು ಆತನ ಭವಿಷ್ಯ ಹಾಳಾಗಬಾರದು ಎಂದು ಕೇಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.
ಅಶ್ಲೀಲವಾಗಿ ಮೆಸೇಜ್ ಮಾಡಿದವನು ವಿದ್ಯಾರ್ಥಿ ಆಗಿದ್ದು, ಅವನ ಭವಿಷ್ಯ ಹಾಳಾಗಬಾರದು ಎನ್ನುವ ಉದ್ದೇಶದಿಂದ ಕೇಸ್ ವಾಪಸ್ ಪಡೆಯುತ್ತೇನೆ. ವಿದ್ಯಾರ್ಥಿಗೆ ಬುದ್ಧಿ ಹೇಳಿ ಕಳಿಸುವಂತೆ ಪೊಲೀಸರಿಗೂ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಪಲ್ಲವಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಇಂತಹ ತಪ್ಪು ಮಾಡದಂತೆ ಮನವಿ ಮಾಡಿದ್ದಾರೆ.
Advertisement