
ಹಿರಿಯ ನಟ ದೇವರಾಜ್ ಅವರ ಪುತ್ರ ಪ್ರಣಮ್ ದೇವರಾಜ್ ನಟನೆಯ 'S/O ಮುತ್ತಣ್ಣ' ಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಆಗಸ್ಟ್ 22 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಚಿತ್ರಕ್ಕೆ ಶ್ರೀಕಾಂತ್ ಹುಣಸೂರು ನಿರ್ದೇಶನವಿದ್ದು, ಪುರಾತನಾ ಫಿಲ್ಮ್ಸ್ ಮತ್ತು ಎಸ್‌ಆರ್‌ಕೆ ಫಿಲ್ಮ್ಸ್ ಬಂಡವಾಳ ಹೂಡಿವೆ. ಚಿತ್ರದಲ್ಲಿ ಪ್ರಣಮ್ ಅವರಿಗೆ ಜೋಡಿಯಾಗಿ ದಿಯಾ ಖ್ಯಾತಿಯ ನಟಿ ಕುಷಿ ರವಿ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರತಂಡ ಇದೀಗ ಎರಡನೇ ಹಾಡು 'ಮಿಡ್ನೈಟು ರಸ್ತೆಯಲ್ಲಿ' ಅನ್ನು ಬಿಡುಗಡೆ ಮಾಡಿದೆ. ಹಾಡನ್ನು ಸಚಿನ್ ಬಸ್ರೂರ್ ಸಂಯೋಜಿಸಿದ್ದು, ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಯೋಗರಾಜ್ ಭಟ್ ಅವರ ಸಾಹಿತ್ಯ ಮತ್ತು ಧನಂಜಯ್ ಮಾಸ್ಟರ್ ಅವರ ನೃತ್ಯ ಸಂಯೋಜನೆಯೊಂದಿಗೆ, ಹಾಡು ಈಗಾಗಲೇ ಆನ್‌ಲೈನ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿದೆ.
ಅಪ್ಪ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಪ್ರಣಮ್ ದೇವರಾಜ್ ತಂದೆ-ಮಗನಾಗಿ ಕಾಣಿಸಿಕೊಂಡಿದ್ದಾರೆ. 'ಚಿತ್ರದಲ್ಲಿ ಯಾವುದೇ ಹೋರಾಟದ ದೃಶ್ಯಗಳಿಲ್ಲ ಮತ್ತು ಇದು ಕೇವಲ ಶುದ್ಧ, ಬೇರೂರಿರುವ ನಿರೂಪಣೆಯಾಗಿದೆ. ಕಳೆದ ಏಳುವರೆ ವರ್ಷಗಳ ಬಳಿಕ ಇದು ನನ್ನ ಮೊದಲ ಬಿಡುಗಡೆಯಾಗಿದೆ ಮತ್ತು ಈ ಪ್ರಯಾಣವು ಅದ್ಭುತವಾಗಿದೆ. ರಂಗಾಯಣ ರಘು ಸರ್ ಪ್ರತಿ ದೃಶ್ಯವನ್ನು ವಿಶೇಷವಾಗಿಸಿದ್ದಾರೆ' ಎಂದು ಪ್ರಣಮ್ ಹೇಳುತ್ತಾರೆ.
'ಕಥೆ ಪ್ರಾಮಾಣಿಕವಾಗಿದೆ ಎಂದು ದೇವರಾಜ್ ಹೇಳಿದ್ದರು ಮತ್ತು ಚಿತ್ರ ನೋಡಿದ ನಂತರ ಅವರು ಅದಕ್ಕೆ ಬದ್ಧರಾಗಿದ್ದರು' ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ಹೇಳಿದರು.
ಚಿತ್ರದಲ್ಲಿ ಖುಷಿ ರವಿ ಡಾ. ಸಾಕ್ಷಿ ಪಾತ್ರದಲ್ಲಿ ನಟಿಸಿದ್ದಾರೆ. 'ಇದು ನನ್ನ ಏಳನೇ ಸಿನಿಮಾ. ಬೇರೆ ಭಾಷೆಗಳಲ್ಲಿ ನನಗೆ ಕೆಲಸ ಸಿಗುತ್ತಿದ್ದರೂ, ಕನ್ನಡದಲ್ಲಿ ಇನ್ನೂ ಹೆಚ್ಚಿನ ಪಾತ್ರಗಳನ್ನು ಮಾಡಬೇಕೆಂಬ ಆಸೆ ನನಗಿದೆ' ಎಂದು ಅವರು ಹೇಳಿದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅವುಗಳಲ್ಲಿ ಎರಡು ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಇನ್ನುಳಿದಂತೆ ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸದ್ಯ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಉಳಿದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಸ್ಕೇಟಿಂಗ್ ಕೃಷ್ಣ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ.
Advertisement