
ಲೈಟರ್ ಬುದ್ಧ ಫಿಲ್ಮ್ಸ್ ಅಡಿಯಲ್ಲಿ ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆಪಿ ತುಮಿನಾಡ್ ನಿರ್ದೇಶಿಸಿದ 'ಸು ಫ್ರಮ್ ಸೋ' ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಸಾಗಿದೆ. ಮಂಗಳೂರಿನಲ್ಲಿ ಒಂದೇ ಪ್ರೀಮಿಯರ್‌ನೊಂದಿಗೆ ಪ್ರಾರಂಭವಾದ 'ಸು ಫ್ರಮ್ ಸೋ' ನಂತರ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪ್ರೀಮಿಯರ್ ಕಂಡಿತು. ಜುಲೈ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ಕರ್ನಾಟಕದಾದ್ಯಂತ 28 ಪ್ರಿವ್ಯೂ ಪ್ರದರ್ಶನ ಕಂಡಿತು.
ಅಂದಿನಿಂದ, ಈ ಚಿತ್ರವು ಚಿತ್ರಮಂದಿರಗಳತ್ತ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದು, ಕೇವಲ ಮೂರು ದಿನಗಳಲ್ಲಿ 3.80 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಗಮನಾರ್ಹವಾಗಿ, ಭಾನುವಾರದಂದು ಬೆಳಗಿನ ಜಾವ 72 ಪ್ರದರ್ಶನಗಳನ್ನು ಕಂಡ, ವಾರದ ದಿನಗಳಲ್ಲಿಯೂ ಸಹ ಹೌಸ್‌ಫುಲ್ ಆಗಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡದ ಚಿತ್ರವಾಗಿದೆ.
ಈ ವರ್ಷ ಬಿಡುಗಡೆಯಾದ ಕನ್ನಡ ಚಿತ್ರಗಳು ಕುಂಟುತ್ತಾ ಸಾಗುತ್ತಿದ್ದ ವೇಳೆಯಲ್ಲಿ, 'ಸು ಫ್ರಮ್ ಸೋ' ಚಿತ್ರವು ಅತ್ಯಂತ ಬೇಡಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರತಂಡವು ಮೂರು ದಿನಗಳಲ್ಲಿ ₹7 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರವು ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆ ಪಡೆಯುತ್ತಿದ್ದು, ಪ್ರತಿದಿನ ತನ್ನ ಶೋಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರೇಕ್ಷಕರು ಈ ಚಿತ್ರಕ್ಕೆ ಟಿಕೆಟ್‌ಗಳನ್ನು ಪಡೆಯಲು ಇನ್ನೂ ಹೆಣಗಾಡುತ್ತಲೇ ಇದ್ದಾರೆ. 'ಸು ಫ್ರಮ್ ಸೋ' ಈಗ ಕರ್ನಾಟಕದ ಗಡಿಗಳನ್ನು ಮೀರಿ ಪ್ರದರ್ಶನಗೊಳ್ಳುತ್ತಿದೆ.
ಇತರ ಭಾಷೆಗಳಲ್ಲಿ ಬೇಡಿಕೆ, ಆಗಸ್ಟ್ 1 ರಂದು ವಿದೇಶಗಳಲ್ಲಿ ಬಿಡುಗಡೆ
ಆಗಸ್ಟ್ 1 ರಂದು ಈ ಚಿತ್ರವು ಕೇರಳದಲ್ಲಿ ಅದೇ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ನಟ ದುಲ್ಕರ್ ಸಲ್ಮಾನ್ ಅವರ ಬೆಂಬಲದೊಂದಿಗೆ, ಅವರ ವೇಫೇರರ್ ಫಿಲ್ಮ್ಸ್ ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಕಾಂತಾರ, ಕೆಜಿಎಫ್ ಮತ್ತು ಪುಷ್ಪದಂತಹ ದಕ್ಷಿಣ ಭಾರತದ ಚಿತ್ರಗಳನ್ನು ಬಿಡುಗಡೆ ಮಾಡಿದ ಅನಿಲ್ ಥಡಾನಿಯವರ ಎಎ ಫಿಲ್ಮ್ಸ್, ಉತ್ತರ ಭಾರತದಾದ್ಯಂತ ಸು ಫ್ರಮ್ ಸೋ ಕನ್ನಡ ಆವೃತ್ತಿಯನ್ನು ವಿತರಿಸಲು ಸಜ್ಜಾಗಿದೆ.
ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ದೆಹಲಿ ಮತ್ತು ಪಂಜಾಬ್‌ನಂತಹ ನಗರಗಳಲ್ಲಿ ಈಗಾಗಲೇ ಸೀಮಿತ ಪ್ರದರ್ಶನಗಳನ್ನು ಕಾಣುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿವೆ. ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಸದ್ಯ ಡಬ್ಬಿಂಗ್ ಪ್ರಗತಿಯಲ್ಲಿದೆ. ಈಮಧ್ಯೆ, ಜಾಗತಿಕ ಪ್ರೇಕ್ಷಕರು ಕೂಡ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ಫಾರ್ಸ್ ಫಿಲ್ಮ್ ಮೂಲಕ, ಸು ಫ್ರಮ್ ಸೋ ಚಿತ್ರವು ಆಗಸ್ಟ್ 1 ರಿಂದ ಯುಎಸ್ಎ, ಆಸ್ಟ್ರೇಲಿಯಾ, ದುಬೈ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.
Advertisement