
ಬೆಂಗಳೂರು: 'ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ' ಎಂಬ ತಮಿಳು ನಟ ಕಮಲ್ ಹಾಸನ್ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ ಅವರು ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ. ಭಾಷಾ ಉಗಮದ ನಿಖರ ಮಾಹಿತಿ ಇಲ್ಲ ಎಂದಾದಲ್ಲಿ ಅವರ ಹೇಳಿಕೆ ಅವಮಾನವಲ್ಲ. ತಮಿಳಿಂದ ಕನ್ನಡ ಬಂದಿದೆ ಎಂದಾದರೆ ಸರಿ, ತಪ್ಪೇನಿಲ್ಲ' ಎಂದರು.
'ನನ್ನ ತಾಯಿಯ ಹೊಟ್ಟೆ ಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅದು ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ತುಂಬಾ ತಿಳಿದಂತಹ ಮನುಷ್ಯ ಏನೋ ಹೇಳಿದ್ದಾರೆ ಎಂದರೆ ಅದಕ್ಕೊಂದು ತರ್ಕ ಇರುತ್ತದೆ. ಅದಕ್ಕೆ ಏನೋ ಒಂದು ಅರ್ಥ ಇರಬೇಕು. ಅದನ್ನು ಪ್ರಶ್ನೆ ಮಾಡಿ, ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ' ಎಂದು ಹೇಳಿದರು.
ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು, ಇನ್ನೊಂದು ಭಾಷೆ ಕೀಳು ಎಂಬುದಿಲ್ಲ. ಕನ್ನಡ ಎಲ್ಲಿಂದಲೋ ಹುಟ್ಟಿ ಬಂದಿದೆ, ಹಾಗೆಯೇ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಇಂತಹ ವಿಷಯದಲ್ಲಿ ಜನರನ್ನು ಭಾವುಕವಾಗಿ ರೊಚ್ಚಿಗೆಬ್ಬಿಸಬಾರದು ಎಂದು ಸಲಹೆ ನೀಡಿದರು.
ಒಂದು ವೇಳೆ, ತಮಿಳಿನಿಂದ ಕನ್ನಡ ಬಂದಿದೆ ಎಂದಾದರೆ, ಅದು ಸರಿ. ಅದರಲ್ಲಿ ತಪ್ಪೇನಿಲ್ಲ. ಭಾಷೆಗಳ ಬಗ್ಗೆ ಬಹಳಷ್ಟು ಸಿದ್ಧಾಂತಗಳಿವೆ. ಕೆಲವು ಭಾಷೆ ಎಲ್ಲಿಂದ ಬಂತು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದು ಹೇಳಿದರೆ ಅದನ್ನು ಅವಮಾನ ಎಂದು ಯಾಕೆ ಭಾವಿಸಬೇಕು ಎಂದು ಪ್ರಶ್ನಿಸಿದರು.
'ಕಮಲ್ ಹಾಸನ್ ಹೇಳಿರೋದು ಸಹ ಒಂದು ಥಿಯರಿ (ಸಿದ್ಧಾಂತ) ಇರಬಹುದು. ಅವರ ಥಿಯರಿ ಏನು ಎಂಬುದನ್ನು ತಿಳಿದುಕೊಳ್ಳೋಣ. ನನ್ನ ಅಭಿಪ್ರಾಯದಲ್ಲಿ ಅವರ ಹೇಳಿಕೆ ಅವಮಾನಕರವಲ್ಲ' ಎಂದು ಅವರು ಅಭಿಪ್ರಾಯಪಟ್ಟರು.
'ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನೂ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡಬಾರದು. ಭಾಷೆಯನ್ನು ಭಾಷೆಯಾಗಿ ನೋಡಬೇಕು' ಎಂದರು.
Advertisement