
ನವದೆಹಲಿ: 'ಪುಷ್ಪ 2' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದ್ದು, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಅಟ್ಲೀ ನಿರ್ದೇಶನದ ಚಿತ್ರ 'AA22 x A6'ನಲ್ಲಿ ನಟಿಸಲಿದ್ದಾರೆ. ಹೊಸ ವಿಚಾರವೆಂದರೆ, ಈ ಚಿತ್ರಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣ ಬ್ಯಾನರ್‌ನಿಂದ ಬೆಂಬಲಿತವಾದ ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'AA22 x A6' ಎಂದು ಹೆಸರಿಡಲಾಗಿದ್ದು, ಇದೊಂದು ದೊಡ್ಡ ಸಿನಿಮಾ ಎಂದೇ ಬಿಂಬಿಸಲಾಗಿದೆ.
ಸದ್ಯ ಹೆಸರಿಡದ ಈ ಚಿತ್ರವನ್ನು ಏಪ್ರಿಲ್‌ನಲ್ಲಿ ನಟ ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲಾಯಿತು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸನ್ ಪಿಕ್ಚರ್ಸ್, 'ವಿಜಯ ಸಾಧಿಸುವ ಕಡೆಗೆ ರಾಣಿಯ ಮೆರವಣಿಗೆ! ದೀಪಿಕಾ ಪಡುಕೋಣೆಗೆ ಸ್ವಾಗತ. #TheFacesOfAA22xA6 #AA22xA6. ಸನ್ ಪಿಕ್ಚರ್, ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರಿಂದ ಒಂದು ಅದ್ಭುತ ಕೃತಿ' ಎಂದು ಬರೆದಿದೆ.
ನಟಿ ದೀಪಿಕಾ ಪಡುಕೋಣೆ ಚಿತ್ರತಂಡ ಸೇರಿರುವ ಕುರತು ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ.
2023ರ ಬ್ಲಾಕ್‌ಬಸ್ಟರ್ ಚಿತ್ರ 'ಜವಾನ್' ನಂತರ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಅಟ್ಲೀ ಮತ್ತೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದಿಂದ ಹೊರನಡೆದ ಬಳಿಕ ಅಟ್ಲೀ ಜೊತೆಗೆ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
Advertisement