
ಹರಿವು, ನಾತಿಚರಾಮಿ, ACT 1978 ಮತ್ತು 19.20.21 ಚಿತ್ರಗಳನ್ನು ನಿರ್ದೇಶಿಸಿದ್ದ ಮಂಸೋರೆ ಇದೀಗ 'ದೂರ ತೀರ ಯಾನ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದೇವರಾಜ್ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜುಲೈ 11ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಶೀರ್ಷಿಕೆ ಗೀತೆ ಈಗಾಗಲೇ ಕೇಳುಗರನ್ನು ಆಕರ್ಷಿಸಿದೆ. ಕಿರಣ್ ಕಾವೇರಪ್ಪ ಬರೆದ, ಬಕ್ಕೇಶ್ ರೋನಡ ಮತ್ತು ಕಾರ್ತಿಕ್ ಸಂಗೀತ ಸಂಯೋಜಿಸಿದ ಮತ್ತು ಬಕ್ಕೇಶ್ ಮತ್ತು ಇಶಾ ಸುಚಿ ಹಾಡಿರುವ ಈ ಹಾಡನ್ನು ನಿರ್ಮಾಪಕ ದೇವರಾಜ್ ಅವರ ಮಗ ಜಯರಾಮ್ ಬಿಡುಗಡೆ ಮಾಡಿದರು.
'ಈ ಚಿತ್ರದಲ್ಲಿ ಆರು ಹಾಡುಗಳು ಮತ್ತು ಎರಡು ಮ್ಯೂಸಿಕಲ್ ಬಿಟ್ಸ್‌ಗಳಿವೆ. ನಾನು ಕಾರ್ತಿಕ್ ಅವರೊಂದಿಗೆ ಶೀರ್ಷಿಕೆ ಗೀತೆಯನ್ನು ಸಂಯೋಜಿಸಿದ್ದೇನೆ. ಹಾಡನ್ನು ನಾನು ಮತ್ತು ಇಶಾ ಸುಚಿ ಹಾಡಿದ್ದೇವೆ. ನಾವು ಕೆಲವು ಅಸಾಧಾರಣ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಈ ಪ್ರಕ್ರಿಯೆಯು ತೃಪ್ತಿಕರವಾಗಿತ್ತು' ಎಂದು ಬಕ್ಕೇಶ್ ರೋನಡ ಹೇಳಿದರು.
'ನಮ್ಮ ಹಾಡುಗಳು ಸಂಪೂರ್ಣವಾಗಿ ಕನ್ನಡದಲ್ಲಿವೆ ಮತ್ತು ಒಂದೇ ಒಂದು ಇಂಗ್ಲಿಷ್ ಪದವನ್ನು ಬಳಸಲಾಗಿಲ್ಲ. ಅದು ನಮ್ಮ ಭಾಷೆಯ ಸೌಂದರ್ಯ. ಈ ಶೀರ್ಷಿಕೆ ಗೀತೆ ನನ್ನ ನೆಚ್ಚಿನ ಹಾಡುಗಳಲ್ಲಿ ಒಂದಾಗಿದೆ. ಇದು ಲಾಂಗ್ ಡ್ರೈವ್ ತೆರಳುವ ವೇಳೆ ಸೂಕ್ತವಾಗಿದೆ. ಬಕ್ಕೇಶ್ ಸುಮಾರು ಒಂದು ವರ್ಷದಿಂದ ಚಿತ್ರದ ಸಂಗೀತದಲ್ಲಿ ಕೆಲಸ ಮಾಡಿದ್ದಾರೆ' ಎಂದು ನಿರ್ದೇಶಕ ಮಂಸೋರೆ ಹೇಳಿದರು.
'ದೂರ ತೀರ ಯಾನ' ಚಿತ್ರವು ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆ. ದಾರಿಯುದ್ದಕ್ಕೂ ಅವರ ಪ್ರೀತಿಯ ನಿಜವಾದ ಅರ್ಥವನ್ನು ಹುಡುಕುತ್ತದೆ ಎಂದು ಅವರು ಹೇಳಿದರು.
Advertisement