
ಹೈದರಾಬಾದ್: ಪ್ರಸಿದ್ಧ ಗಾಯಕಿ ಮಂಗ್ಲಿ ದೊಡ್ಡ ವಿವಾದದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಕಳೆದ ಮಂಗಳವಾರ ಜೂನ್ 10ರಂದು ರಾತ್ರಿ ಅವರ ಹುಟ್ಟುಹಬ್ಬದ ಪಾರ್ಟಿ ಹೈದರಾಬಾದ್ ನ ಚೆವೆಲ್ಲ ಮಂಡಲದ ತ್ರಿಪುರ ರೆಸಾರ್ಟ್‌ನಲ್ಲಿ ನಡೆಯಿತು. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ, ಪಾರ್ಟಿಯಲ್ಲಿ ಮದ್ಯ, ಮಾದಕ ವಸ್ತುಗಳ ಸರಬರಾಜು ಆಗಿದೆ ಎಂಬುದು ವಿವಾದವಾಗಿದೆ.
ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಗೆ ಹಲವಾರು ಟಾಲಿವುಡ್ ಸೆಲೆಬ್ರಿಟಿಗಳು, ನಟ-ನಟಿಯರು ಹಾಜರಿದ್ದರು ಎನ್ನಲಾಗಿದೆ. ಪಾರ್ಟಿಯಲ್ಲಿ ಮಾದಕ ದ್ರವ್ಯಗಳು, ಗಾಂಜಾ, ವಿದೇಶಿ ಮದ್ಯ ಸರಬರಾಜಾಗಿದೆ ಎಂಬ ಮಾಹಿತಿ ಸಿಕ್ಕಿ ಪೊಲೀಸರು ದಾಳಿ ನಡೆಸಿ ಗಾಯಕಿ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು ಪೊಲೀಸರು ಮಂಗ್ಲಿಯನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರು ದಾಳಿ ಮಾಡಿ ತೀವ್ರ ಶೋಧ ನಡೆಸಿದ್ದಾರೆ.
ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಾದಕ ದ್ರವ್ಯಗಳು
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗ್ಲಿ ಹುಟ್ಟುಹಬ್ಬ ಪಾರ್ಟಿಯಲ್ಲಿ ಭಾಗವಹಿಸಿದ ಸೆಲೆಬ್ರಿಟಿಗಳು ಯಾರು ಎಂಬ ವಿವರಗಳು ಇನ್ನೂ ಹೊರಬಿದ್ದಿಲ್ಲ. ಆದರೆ ಪೊಲೀಸರ ಮಾಹಿತಿಯ ಪ್ರಕಾರ, ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೆಲವರಿಗೆ ಗಾಂಜಾ ಪಾಸಿಟಿವ್, ಇನ್ನು ಕೆಲವರಿಗೆ ಮಾದಕ ದ್ರವ್ಯಗಳು ಪಾಸಿಟಿವ್ ಎಂದು ದೃಢಪಟ್ಟಿದೆ.
ಗಾಯಕಿ ಮಂಗ್ಲಿ ಹೇಳಿದ್ದೇನು?
ನನ್ನ ಪೋಷಕರ ಕೋರಿಕೆಯ ಮೇರೆಗೆ ನಾನು ಸ್ನೇಹಿತರು ಮತ್ತು ಸಂಬಂಧಿಕರಿಗಾಗಿ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿದ್ದೆ. ಮದ್ಯ ಮತ್ತು ಧ್ವನಿಮುದ್ರಣಕ್ಕೆ ಅನುಮತಿ ಅಗತ್ಯವಿದೆ ಎಂದು ನನಗೆ ತಿಳಿದಿರಲಿಲ್ಲ. ಯಾವುದೇ ಡ್ರಗ್ಸ್ ಬಳಸಿಲ್ಲ, ಸ್ಥಳೀಯ ಮದ್ಯವನ್ನ ಮಾತ್ರ ಕೊಡಲಾಗುತ್ತಿತ್ತು. ಮಾದಕ ದ್ರವ್ಯ ಸೇವನೆಗೆ ಪಾಸಿಟಿವ್ ಪರೀಕ್ಷೆ ನಡೆಸಿದ ವ್ಯಕ್ತಿ ಬೇರೆಡೆ ಸೇವಿಸಿದ್ದಾನೆ. ಪೊಲೀಸರು ಅದನ್ನು ತನಿಖೆ ಮಾಡುತ್ತಿದ್ದಾರೆ. ದಯವಿಟ್ಟು ಯಾವುದೇ ಆರೋಪಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ.
ಪಾರ್ಟಿಯಲ್ಲಿ ಸ್ಥಳೀಯ ಮದ್ಯ ಪೂರೈಕೆಯಾಗಿರುವುದು ನಿಜ. ಇಷ್ಟು ದೊಡ್ಡ ಪಾರ್ಟಿ ಮಾಡುವಾಗ ಮದ್ಯ ಕೊಡಲು ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಇದನ್ನು ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಪಶ್ಚಾತಾಪ ಇದೆ.
ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ವಿಡಿಯೊ ಮೂಲಕ ಮಂಗ್ಲಿ ಹೇಳಿದ್ದಾರೆ.
ರೆಸಾರ್ಟ್ ನ ಆ ಜಾಗದ ಮ್ಯಾನೇಜರ್ ಡ್ರಗ್ಸ್ ಸೇವನೆ ಮಾಡಿದ್ದು ಖಚಿತವಾಗಿದೆಯಲ್ಲವೇ ಎಂದು ಕೇಳಿದಾಗ, ‘ಅವರು ಬೇರೆಲ್ಲೋ ಡ್ರಗ್ಸ್ ಸೇವನೆ ಮಾಡಿ ಬಂದಿದ್ದಿರಬಹುದು. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗ್ಲಿ ಅವರು ದೊಡ್ಡ ಪಾರ್ಟಿ ಮಾಡಲು ಯಾವುದೇ ಒಪ್ಪಿಗೆ ಪಡೆದಿರಲಿಲ್ಲ. ಈ ವಿಚಾರ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ವಿದೇಶಿ ಮದ್ಯ ಸಿಕ್ಕಿದೆ ಎನ್ನಲಾಗಿದೆ. ಮಂಗ್ಲಿ ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು, ಡ್ರಗ್ಸ್ ಸೇವನೆ ಮಾಡಿಲ್ಲ ಎಂಬುದು ಅಧಿಕೃತ ಆಗಿದೆ.
Advertisement