
ಬಿಡುಗಡೆ ಹೊಸ್ತಿಲಲ್ಲಿರುವ ''ಕಪಟಿ'' ಶೀರ್ಷಿಕೆಯ ಕನ್ನಡದ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಚಿತ್ರ : ಮಾ.7ಕ್ಕೆ ಬಿಡುಗಡೆಯಾಗಲಿದೆ.
ಸುಕೃತಾ ವಾಗ್ಲೆ, ದೇವ್ ದೇವಯ್ಯ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ವೇಳೆ ಚಿತ್ರ ತಂಡ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.
ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಅನಾವರಣ ಮಾಡಿ ಶುಭ ಕೋರಿದರು.
ಹಗ್ಗದ ಕೊನೆ, ಆ ಕರಾಳ ರಾತ್ರಿ ಸಿನಿಮಾ ಮೂಲಕ ಯಶಸ್ಸು ಪಡೆದಿರುವ ನಿರ್ದೇಶಕ ಮತ್ತು ನಿರ್ಮಾಪಕ ದಯಾಳ್ ಪದ್ಮನಾಭನ್ ಅವರು, ತಮ್ಮದೇ ಡಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ "ಕಪಟಿ" ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ದಯಾಳ್ ಪದ್ಮನಾಭನ್ ಅವರು, ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ಹಾಗು ಚಿತ್ರದ ನಿರ್ದೇಶಕರೂ ಆಗಿರುವ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಮೊದಲು ಈ ಚಿತ್ರದ ನಿರ್ಮಾಣ ಆರಂಭಿಸಿದ್ದರು. ನಂತರ ನನ್ನ ಬಳಿ ಬಂದು ಈ ಚಿತ್ರದ ಬಗ್ಗೆ ಹೇಳಿದರು. ನಾನು ಸಹ ಚಿತ್ರವನ್ನು ನೋಡಿದೆ. ನನಗೆ ಚಿತ್ರ ಇಷ್ಟವಾಯಿತು. ಆನಂತರ ನಾನು ಅವರ ಬಳಿ ಚಿತ್ರಕ್ಕೆ ಸಂಬಂಧಿಸಿದ ಹಾಗೆ ಕೆಲವು ಕಂಡೀಶನ್ ಗಳನ್ನು ಹೇಳಿದೆ. ನನ್ನ ಎಲ್ಲಾ ಕಂಡೀಶನ್ ಗಳಿಗೆ ಅವರು ಒಪ್ಪಿದರು. ಆನಂತರ ಚಿತ್ರದ ಪೂರ್ಣ ನಿರ್ಮಾಣದ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಡಾರ್ಕ್ ವೆಬ್ ಜಾನರ್ ನ ಚಿತ್ರವಿದು. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮಾರ್ಚ್ 7 ರಂದು ತೆರೆಗೆ ಬರಲಿದೆ ಎಂದು ಹೇಳಿದರು.
ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಾಮಾನ್ಯ ಜನರಿಗೆ ಮೊಬೈಲ್ ಮಾತ್ರ ಗೊತ್ತು. ಆದರೆ, ಅದೇ ಮೊಬೈಲ್‌ನಿಂದ ನಾವು ಹೇಗೆ ಮೋಸ ಹೋಗುತ್ತೇವೆ ಎಂಬ ತಿಳಿವಳಿಕೆ ಕಡಿಮೆ. ನಮ್ಮ ಚಿತ್ರದಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಆ ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತಾ ವಾಗ್ಲೆ ಮಾಡಿದ್ದಾರೆ.
ಇದೊಂದು ಜನಸಾಮಾನ್ಯರ ಕಥೆ. ಆನ್‌ಲೈನ್ ಶೋಷಣೆಯ ಪರಿಣಾಮಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಚಿತ್ರದ ಸಂಗೀತವನ್ನು ಜೋಹಾನ್ ಶೆವನೇಶ್ ಸಂಯೋಜಿಸಿದ್ದರೆ, ಛಾಯಾಗ್ರಹಣವನ್ನು ಸತೀಶ್ ರಾಜೇಂದ್ರನ್ ನಿರ್ವಹಿಸಿದ್ದಾರೆ.
Advertisement