
ಚೆನ್ನೈ: ತೆಲುಗು ಸ್ಟಾರ್ ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ನಟಿಸುತ್ತಿದ್ದು, ತಮ್ಮ ಪಾತ್ರದ ಲುಕ್ ಟೆಸ್ಟ್ ಅನ್ನು ಪೂರ್ಣಗೊಳಿಸಿದ್ದಾರೆ ಮತ್ತು ಶೀಘ್ರದಲ್ಲೇ ಚಿತ್ರದ ಸೆಟ್‌ಗೆ ಸೇರಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ ವೃದ್ಧಿ ಸಿನಿಮಾಸ್ ತನ್ನ X ಖಾತೆಯಲ್ಲಿ ಶಿವರಾಜ್‌ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ ಲುಕ್ ಟೆಸ್ಟ್‌ಗೆ ಒಳಗಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ 'RC 16' ಎಂದು ಹೆಸರಿಡಲಾಗಿದೆ.
'RC 16 ಚಿತ್ರಕ್ಕಾಗಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ಲುಕ್ ಟೆಸ್ಟ್ ಪೂರ್ಣಗೊಂಡಿದೆ. ಅವರು ತಮ್ಮ ಪಾತ್ರಕ್ಕಾಗಿ ಬೆರಗುಗೊಳಿಸುವ ಮೇಕ್ ಓವರ್‌ಗೆ ಸಿದ್ಧರಾಗಿದ್ದಾರೆ. ಅದು ಅತ್ಯುತ್ತಮ ಮತ್ತು ಸೆನ್ಸೇಷನಲ್ ಆಗಿರುತ್ತದೆ. ಅವರು ಶೀಘ್ರದಲ್ಲೇ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ' ಎಂದು ಬರೆದಿದ್ದಾರೆ.
ನಟ ರಾಮ್ ಚರಣ್ ಈ ಚಿತ್ರಕ್ಕಾಗಿ ಜನಪ್ರಿಯ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರಿಂದ ಮೇಕ್ ಓವರ್ ಪಡೆದಿದ್ದಾರೆ. ಇದನ್ನು ನಿರ್ಮಾಪಕರು 'ಹಿಂದೆಂದೂ ನೋಡಿರದ ಮ್ಯಾಸೀವ್ ಲುಕ್' ಎಂದು ಕರೆದಿದ್ದಾರೆ.
ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಆಂಧ್ರ ಪ್ರದೇಶದ ಉತ್ತರಾಂಧ್ರ ಪ್ರದೇಶದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ರಾಮ್ ಮತ್ತು ಜಾನ್ವಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಕರ್ನಾಟಕದ ಮೈಸೂರಿನಲ್ಲಿ ಸದ್ಯ ಚಿತ್ರೀಕರಣ ನಡೆಸುತ್ತಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿವೆ. ಅಲ್ಲಿ ಚಿತ್ರೀಕರಣ ಪೂರ್ಣಗೊಂಡ ನಂತರ, ಚಿತ್ರತಂಡ ದೆಹಲಿಗೆ ತೆರಳುವ ನಿರೀಕ್ಷೆಯಿದೆ.
ಚಿತ್ರದಲ್ಲಿ ನಟರಾದ ಜಗಪತಿ ಬಾಬು ಮತ್ತು ದಿವ್ಯೇಂದು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ರತ್ನವೇಲು ಅಲಿಯಾಸ್ ರಾಂಡಿ ಅವರ ಛಾಯಾಗ್ರಹಣವಿದೆ. ಇವರು ನೈಸರ್ಗಿಕ ಬೆಳಕನ್ನು ಬಳಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಚಿತ್ರಕ್ಕೆ ಕೊಲ್ಲಾ ಅವಿನಾಶ್ ಅವರ ಕಲಾ ನಿರ್ದೇಶನವಿದ್ದು, ಏಗನ್ ಏಕಾಂಬರಂ ಅವರ ಕಾಸ್ಟ್ಯೂಮ್ಸ್ ಇದೆ.
Advertisement