
ನಿರಂಜನ್ ಸುಧೀಂದ್ರ ತಮ್ಮ ಮುಂದಿನ ಚಿತ್ರ ಸ್ಪಾರ್ಕ್‌ಗೆ ಸಜ್ಜಾಗಿದ್ದು, ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಗುರುವಾರ ಚಿತ್ರದ ಮುಹೂರ್ತ ನೆರವೇರಿದ್ದು, ಅದ್ಧೂರಿ ಸಮಾರಂಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರು ಕ್ಲಾಪ್ ಮಾಡಿದರೆ, ಉದ್ಯಮಿ ಅಂಕಿತಾ ವಸಿಷ್ಠ ಕ್ಯಾಮೆರಾ ಆನ್ ಮಾಡಿ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಸ್ಟಾರ್ ಜೋಡಿಯಾದ ನಟ ಡಾರ್ಲಿ್ಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೊತೆಗೆ ನಟ ನವೀನ್ ಶಂಕರ್ ವಿಶೇಷ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭಕೋರಿದರು.
ಚೇತನ್ ಕುಮಾರ್ ಮತ್ತು ಆರ್ ಚಂದ್ರು ಅವರ ಅಡಿಯಲ್ಲಿ ಪಳಗಿರುವ ಮತ್ತು ಜೇಮ್ಸ್, ಭರಾಟೆ ಮತ್ತು ಕನಕ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ ಡಿ ಮಹಾಂತೇಶ ಹಂದ್ರಾಳ್ ಇದೀಗ 'ಸ್ಪಾರ್ಕ್' ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಚಿತ್ರಕ್ಕೆ ಡಾ. ಗರಿಮಾ ಅವಿನಾಶ್ ವಶಿಷ್ಠ ಸೇರಿದಂತೆ ಇಬ್ಬರು ಬಂಡವಾಳ ಹೂಡಿದ್ದಾರೆ. ಗರಿಮಾ ನಿರ್ಮಾಪಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
'ಸ್ಪಾರ್ಕ್ ನನ್ನ ಚೊಚ್ಚಲ ಚಿತ್ರ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭಿಸಲು ನಾವು ಸಜ್ಜಾಗುತ್ತಿದ್ದೇವೆ. ಚಿತ್ರದ ಹೆಚ್ಚಿನ ಭಾಗವನ್ನು ಬೆಂಗಳೂರು ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡಲಾಗುವುದು' ಎಂದು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಹೇಳುತ್ತಾರೆ. ಚಿತ್ರವು ನಿಜ ಜೀವನದ ಘಟನೆಗಳಿಂದ ಪ್ರೇರಿತವಾದ ಆ್ಯಕ್ಷನ್ ಥ್ರಿಲ್ಲರ್ ಆಗಿರುತ್ತದೆ.
ಪತ್ರಕರ್ತನಾಗಿ ಕಾಣಿಸಿಕೊಳ್ಳಲಿರುವ ನಟನಿರಂಜನ್ ಸುಧೀಂದ್ರ, 'ಈ ಚಿತ್ರಕ್ಕಾಗಿ ಮಹಾಂತೇಶ್ ಅದ್ಭುತ ಕಥೆಯನ್ನು ಬರೆದಿದ್ದಾರೆ. ಸ್ಪಾರ್ಕ್ ಎನ್ನುವುದು ಯಾವುದೇ ವಿಚಾರದ ಕುರಿತು ಮೊದಲ ಕಿಡಿಯನ್ನು ಹೊತ್ತಿಸುವವ ಪತ್ರಕರ್ತರು-ಮಾಧ್ಯಮವನ್ನು ಸೂಚಿಸುತ್ತದೆ. ನಮ್ಮ ಕಥೆಯಲ್ಲಿಯೂ ಒಂದು ಸಣ್ಣ ಕಿಡಿ ಇದೆ ಮತ್ತು ಈ ಚಿತ್ರದ ಮೂಲಕ, ಅದನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದ್ದೇವೆ. ನಾನು ಅಭಿರಾಮ್ ಎಂಬ ಪತ್ರಕರ್ತನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಈ ಚಿತ್ರದ ಭಾಗವಾಗಿದ್ದಕ್ಕೆ ರೋಮಾಂಚನವಾಗಿದೆ' ಎನ್ನುತ್ತಾರೆ ಸುಧೀಂದ್ರ.
ನಿರ್ಮಾಪಕಿ ಡಾ. ಗರಿಮಾ ಅವಿನಾಶ್ ಮಾತನಾಡಿ, 'ಈ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಆರಂಭದಲ್ಲಿ, ನಾನು ಮ್ಯೂಸಿಕ್ ಆಲ್ಬಂ ನಿರ್ಮಿಸಬೇಕೆಂದು ಬಯಸಿದ್ದೆ. ಆದರೆ, ನನ್ನ ಕುಟುಂಬ ಪೂರ್ಣ ಪ್ರಮಾಣದ ಚಿತ್ರವನ್ನು ಕೈಗೆತ್ತಿಕೊಳ್ಳಲು ನನ್ನನ್ನು ಪ್ರೋತ್ಸಾಹಿಸಿತು. ಅವರ ಬೆಂಬಲಕ್ಕೆ ಧನ್ಯವಾದಗಳು. ನಾನಿಂದು ಇಲ್ಲಿದ್ದೇನೆ ಮತ್ತು ಮೊದಲ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಪ್ರತಿಭಾನ್ವಿತ ತಂಡದೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗಿದೆ' ಎಂದು ಹೇಳಿದರು.
ಗರಿಮಾ ಅವಿನಾಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ಮತ್ತು ಮಧು ಸಂಕಲನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
Advertisement