ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ; ಜುಲೈನಲ್ಲಿ ತೆರೆಗೆ!
ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೂದಲು ಜೂನ್ 6 ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಚಿತ್ರತಂಡ ಇದೀಗ ಜುಲೈ 18 ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.
ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಮತ್ತು ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದ ಪಿಆರ್‌ಕೆ ಪ್ರೊಡಕ್ಷನ್ಸ್ ಜಂಟಿಯಾಗಿ ಎಕ್ಕ ಚಿತ್ರವನ್ನು ನಿರ್ಮಿಸಿವೆ.
ರೋಹಿತ್ ಪದಕಿ ಮತ್ತು ಯುವ ರಾಜ್‌ಕುಮಾರ್ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಮೊದಲು ಯುವ ರಾಜ್‌ಕುಮಾರ್ ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಎಕ್ಕ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಜಾಕಿ ಚಿತ್ರವನ್ನು ನೆನಪಿಸುತ್ತದೆ.
ಚಿತ್ರದಲ್ಲಿ ಸಂಪದ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಅತುಲ್ ಕುಲಕರ್ಣಿ ಮತ್ತು ಡೆಡ್ಲಿ ಆದಿತ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಎಕ್ಕ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.